
ಪಾಲ್ಘರ್: ಮರಾಠಿ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ಆಟೋ ರಿಕ್ಷಾ ಚಾಲಕನೊಬ್ಬನನ್ನು ಶಿವಸೇನೆ-ಯುಬಿಟಿ ಕಾರ್ಯಕರ್ತರು ಥಳಿಸಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮಹಾರಾಷ್ಟ್ರದಲ್ಲಿ ಭಾಷಾ ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ. ಈ ವಿಡಿಯೋವನ್ನು ನೋಡಿದ್ದೇವೆ ಆದರೆ, ಇಲ್ಲಿಯವರೆಗೂ ಯಾವುದೇ ದೂರು ದಾಖಲಾಗಿಲ್ಲ. ಹೀಗಾಗಿ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.
ಆಟೋ-ರಿಕ್ಷಾ ಚಾಲಕನಿಗೆ ತಕ್ಕ ಪಾಠ ಕಲಿಸಿದ್ದಾರೆ. ಮರಾಠಿ ಭಾಷೆ ಮತ್ತು ರಾಜ್ಯವನ್ನು ಅವಮಾನಿಸುವವರಿಗೆ "ನಿಜವಾದ ಶಿವಸೇನೆ ಶೈಲಿಯಲ್ಲಿಯೇ ಉತ್ತರ ನೀಡಲಾಗುವುದು ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ- ಯುಬಿಟಿ ಬಣದ ಸ್ಥಳೀಯ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಪಾಲ್ಘರ್‌ನ ವಿರಾರ್ ಪ್ರದೇಶದಲ್ಲಿ ನೆಲೆಸಿರುವ ವಲಸಿಗ ಆಟೋ ರಿಕ್ಷಾ ಚಾಲಕ, ಮರಾಠಿ ಭಾಷೆ, ಮಹಾರಾಷ್ಟ್ರ ಮತ್ತು ಮರಾಠಿ ಗಣ್ಯರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಇದರ ಕ್ಲಿಪ್ ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುವ ಮೂಲಕ ಸ್ಥಳೀಯ ರಾಜಕೀಯ ಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಶನಿವಾರ ಈ ಘಟನೆ ನಡೆದಿದ್ದು, ವಿರಾರ್ ರೈಲು ನಿಲ್ದಾಣದ ಬಳಿಯ ಜನನಿಬಿಡ ರಸ್ತೆಯಲ್ಲಿ ಮಹಿಳೆಯರೂ ಸೇರಿದಂತೆ ಶಿವಸೇನೆ-ಯುಬಿಟಿ ಕಾರ್ಯಕರ್ತರ ಗುಂಪು ಆಟೋ-ರಿಕ್ಷಾ ಚಾಲಕನಿಗೆ ಕಪಾಳಮೋಕ್ಷ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ನಂತರ ಈ ಹಿಂದೆ ಅನುಚಿತವಾಗಿ ವರ್ತಿಸಿದ ವ್ಯಕ್ತಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾನೆ. ಜೊತೆಗೆ ರಾಜ್ಯ ಮತ್ತು ಅದರ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಅವಮಾನ ಪಡಿಸಿದ್ದಕ್ಕಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು.
ಘಟನಾ ಸ್ಥಳದಲ್ಲಿದ್ದ ಶಿವಸೇನೆ-ಯುಬಿಟಿ ವಿರಾರ್ ನಗರ ಮುಖ್ಯಸ್ಥ ಉದಯ್ ಜಾಧವ್ ಆಟೋ ಚಾಲಕನ ಮೇಲಿನ ಹಲ್ಲೆ ಕ್ರಮವನ್ನು ಸಮರ್ಥಿಸಿಕೊಂಡರು. "ಯಾರಾದರೂ ಮರಾಠಿ ಭಾಷೆ, ಮಹಾರಾಷ್ಟ್ರ ಅಥವಾ ಮರಾಠಿ ಜನರನ್ನು ಅವಮಾನಿಸುವ ಧೈರ್ಯ ಮಾಡಿದರೆ, ನಿಜವಾದ ಶಿವಸೇನೆ ಶೈಲಿಯಲ್ಲಿ ಉತ್ತರ ನೀಡಲಾಗುವುದು, ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಜಾಧವ್ ಸುದ್ದಿಗಾರರಿಗೆ ತಿಳಿಸಿದರು.
Advertisement