
ನವದೆಹಲಿ: ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ISS) 18 ದಿನಗಳ ವಾಸ್ತವ್ಯದ ನಂತರ ಮಂಗಳವಾರ ಭೂಮಿಗೆ ಮರಳಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಆಗಸ್ಟ್ 17 ರೊಳಗೆ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ, ಇಂದು ಮಧ್ಯಾಹ್ನ 3 ಗಂಟೆ 2 ನಿಮಿಷಕ್ಕೆ ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಅಮೆರಿಕದ ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಯಶಸ್ವಿಯಾಗಿ ಸ್ಪ್ಲಾಷ್ ಲ್ಯಾಂಡ್ ಆಗಿದ್ದಾರೆ.
"ಭೂಮಿ ಆಗಮಿಸಿದ ನಂತರ ಅವರು ಕೆಲವು SOP ಗಳನ್ನು ಅನುಸರಿಸಬೇಕಾಗಿದೆ... ಅವರ ಪುನಶ್ಚೇತನ, ವಿವರಣೆ ಅವಧಿಗಳು ಮತ್ತು ಇಸ್ರೋ ಜೊತೆ ಸರಣಿ ಚರ್ಚೆಗಳ ನಂತರ ಆಗಸ್ಟ್ 17 ರೊಳಗೆ ದೆಹಲಿಗೆ ಆಗಮಿಸುವ ನಿರೀಕ್ಷೆ ಇದೆ" ಎಂದು ಸಿಂಗ್ ಪಿಟಿಐ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯನ್ನು "ಅಭೂತಪೂರ್ವ" ಎಂದು ಕರೆದ ಸಿಂಗ್, ಕಕ್ಷೆಯ ಪ್ರಯೋಗಾಲಯದಲ್ಲಿ ಶುಕ್ಲಾ ಅವರು ನಡೆಸಿದ ಪ್ರಯೋಗಗಳು ಭಾರತೀಯರಿಗೆ ಮಾತ್ರವಲ್ಲ, ಎಲ್ಲಾ ಮಾನವೀಯತೆಗೆ ಉಪಯುಕ್ತವಾಗುತ್ತವೆ" ಎಂದು ಹೇಳಿದರು.
"ಭಾರತ ಮಾತೆಯ ಹೆಮ್ಮೆಯ ಪುತ್ರ ಇಂದು ಯಶಸ್ವಿಯಾಗಿ ಭೂಮಿಗೆ ಮರಳಿರುವುದು ಭಾರತಕ್ಕೆ ಅಪಾರ ಸಂತೋಷದ ಕ್ಷಣವಾಗಿದೆ" ಎಂದು ಸಿಂಗ್ ಹೇಳಿದರು.
ಆಕ್ಸಿಯಮ್-4 ವಾಣಿಜ್ಯ ಕಾರ್ಯಾಚರಣೆಯ ನೇತೃತ್ವವನ್ನು ಕಮಾಂಡರ್ ಪೆಗ್ಗಿ ವಿಟ್ಸನ್ ವಹಿಸಿದ್ದು, ಶುಕ್ಲಾ ಮಿಷನ್ ಪೈಲಟ್ ಆಗಿ ಮತ್ತು ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಮತ್ತು ಪೋಲಿಷ್ ಗಗನಯಾತ್ರಿ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಕ್ಸಿಯಮ್-4 ಕಾರ್ಯಾಚರಣೆಯು ಅಮೆರಿಕ, ಭಾರತ, ಪೋಲೆಂಡ್, ಹಂಗೇರಿ, ಸೌದಿ ಅರೇಬಿಯಾ, ಬ್ರೆಜಿಲ್, ನೈಜೀರಿಯಾ, ಯುಎಇ ಸೇರಿ 31 ದೇಶಗಳ 60 ವೈಜ್ಞಾನಿಕ ಅಧ್ಯಯನಗಳನ್ನು ಒಳಗೊಂಡಿತ್ತು.
Advertisement