
ಗುವಾಹಟಿ: ಮುಂದಿನ ವರ್ಷ 2026 ರಲ್ಲಿ ನಡೆಯುವ ಅಸ್ಸಾಂ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಬುಧವಾರ ಗುವಾಹಟಿಗೆ ಆಗಮಿಸಿದರು.
ಇಂದು ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ಹೊಸದಾಗಿ ಆಯ್ಕೆಯಾದ ರಾಜ್ಯಾಧ್ಯಕ್ಷ ಗೌರವ್ ಗೊಗೊಯ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ, ಈ ಇಬ್ಬರೂ ನಾಯಕರು ಅಸ್ಸಾಂ ಜನತೆಗೆ ಧೈರ್ಯ ತುಂಬಲು ಬಂದಿದ್ದಾರೆ. ಇಲ್ಲಿನ ಜನರಿಗೆ ಅನ್ಯಾಯವಾಗಿದೆ. ಕಾಂಗ್ರೆಸ್ ಅವರೊಂದಿಗೆ ಯಾವಾಗಲೂ ನಿಂತು ಮುಕ್ತ ಧ್ವನಿಗಾಗಿ ಹೋರಾಡುತ್ತದೆ ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಯಭೀತರಾಗಿದ್ದಾರೆ. ಅತಿಕ್ರಮಣದಾರರಿಂದ ಭೂಮಿಯನ್ನು ಮರಳಿ ಪಡೆಯುವ ಬಗ್ಗೆ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಅವರು ಮತ್ತು ಅವರ ಸಂಪುಟದ ಹಲವು ಸಚಿವರು ಅತ್ಯಧಿಕ ಪ್ರಮಾಣದ ಭೂಮಿಯನ್ನು ಹೊಂದಿದ್ದಾರೆ ಎಂದು ಗೊಗೊಯ್ ಆರೋಪಿಸಿದರು.
ಆನೆ ಕಾರಿಡಾರ್‌ನಲ್ಲಿರುವ ರೆಸಾರ್ಟ್, ಚಹಾ ತೋಟಗಳು ಮತ್ತು ಹೋಟೆಲ್ ಸೇರಿದಂತೆ ಕೆಲವು ಆಸ್ತಿಗಳನ್ನು ಉಲ್ಲೇಖಿಸಿದರು. ಕಾನೂನುಗಳನ್ನು ಉಲ್ಲಂಘಿಸಿ ಕೃಷಿ ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ. ಸ್ಥಳೀಯ, ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ 18,000 ಎಕರೆ ಭೂಮಿಯನ್ನು ಅಸ್ಸಾಂನ ಹೊರಗಿನ ಜನರಿಗೆ ನೀಡಲಾಗಿದೆ ಎಂದು ಅವರು ಆರೋಪಿಸಿದರು.
ಪಕ್ಷದ ನಾಯಕ ರಿಪುನ್ ಬೋರಾ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ 2026 ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅಸ್ಸಾಂಗೆ ಬಂದಿದ್ದಾರೆ. ಇಬ್ಬರೂ ಪಕ್ಷದ ಚುನಾವಣಾ ಸಿದ್ಧತೆಗಳನ್ನು ನಿರ್ಣಯಿಸುತ್ತಾರೆ ಎಂದರು.
Advertisement