
ನವದೆಹಲಿ: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಪ್ರಕರಣದಲ್ಲಿ "ಪರಸ್ಪರ ಒಪ್ಪಿಗೆಯ ಪರಿಹಾರ" ಕಂಡುಕೊಳ್ಳುವ ಪ್ರಯತ್ನಗಳ ಭಾಗವಾಗಿ ಯೆಮೆನ್ ಅಧಿಕಾರಿಗಳು ಮತ್ತು ಕೆಲವು ಸ್ನೇಹಪರ ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿದ್ದೇವೆಂದು ಗುರುವಾರ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾದ ನಿಮಿಷಾ ಪ್ರಿಯಾ ಅವರನ್ನು ರಕ್ಷಿಸಲು “ಕೇಂದ್ರ ಸರ್ಕಾರ ರಾಜತಾಂತ್ರಿಕ ಮಾರ್ಗಗಳನ್ನು ಸಕ್ರಿಯವಾಗಿ ಅನುಸರಿಸುತ್ತಿದೆ. ಮೃತನ ಕುಟುಂಬದೊಂದಿಗೆ ಒಂದು ಒಪ್ಪಂದಕ್ಕೆ ಬರಲು ಹೆಚ್ಚಿನ ಸಮಯವನ್ನು ಕೋರಲು ಸರ್ಕಾರ ಸಂಘಟಿತ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಹೇಳಿದ್ದಾರೆ.
"ಇದು ಸೂಕ್ಷ್ಮ ವಿಷಯವಾಗಿದ್ದು, ಈ ಪ್ರಕರಣದಲ್ಲಿ ಭಾರತ ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ" ಎಂದು ಜೈಸ್ವಾಲ್ ತಮ್ಮ ವಾರದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ನಾವು ಕಾನೂನು ನೆರವು ನೀಡಿದ್ದೇವೆ ಮತ್ತು ಕುಟುಂಬಕ್ಕೆ ಸಹಾಯ ಮಾಡಲು ವಕೀಲರನ್ನು ನೇಮಿಸಿದ್ದೇವೆ. ನಾವು ನಿಯಮಿತ ಕಾನ್ಸುಲರ್ ಭೇಟಿಗಳನ್ನು ಸಹ ಏರ್ಪಡಿಸಿದ್ದೇವೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಸ್ಥಳೀಯ ಅಧಿಕಾರಿಗಳು ಹಾಗೂ ಕುಟುಂಬ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಜುಲೈ 16 ರಂದು ನಿಗದಿಯಾಗಿದ್ದ ಪ್ರಿಯಾ ಅವರ ಗಲ್ಲು ಶಿಕ್ಷೆಯನ್ನು ಯೆಮೆನ್‌ನ ಸ್ಥಳೀಯ ಅಧಿಕಾರಿಗಳು ಮುಂದೂಡಿದ್ದಾರೆ ಎಂದು ಜೈಸ್ವಾಲ್ ಹೇಳಿದರು.
Advertisement