
ಮೈಸೂರು: ರಾಬರ್ಟ್ ವಾದ್ರಾ ವಿರುದ್ಧದ ಇಡಿ ಚಾರ್ಜ್‌ಶೀಟ್ ತಮಗೆ ಮತ್ತು ಗಾಂಧಿ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಮತ್ತು ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸುವ ಪ್ರಯತ್ನ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಆರೋಪಿಸಿದ್ದಾರೆ.
ಹರಿಯಾಣದ ಶಿಕೋಹ್‌ಪುರದಲ್ಲಿ ಭೂ ವ್ಯವಹಾರದಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ಉದ್ಯಮಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ED) ಗುರುವಾರ ಚಾರ್ಜ್‌ಶೀಟ್ ಸಲ್ಲಿಸಿದೆ.
ಒಬ್ಬ ವ್ಯಕ್ತಿಯ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ವಾದ್ರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಒಂದು ಪಕ್ಷವನ್ನು ಗುರಿಯಾಗಿಸುವುದಕ್ಕಾಗಿ, ಅವರು ಇದನ್ನೆಲ್ಲ ಮಾಡುತ್ತಿದ್ದಾರೆ. ವಾದ್ರಾ ಮತ್ತು ಗಾಂಧಿ ಕುಟುಂಬಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನದ ಭಾಗವಾಗಿ ಇದನ್ನು ಮಾಡಲಾಗಿದೆ. ಸೇಡು ತೀರಿಸಿಕೊಳ್ಳಲು ಮುಂದಾಗಿರುವವರು ಅದರಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ. ನ್ಯಾಯಾಲಯಗಳಿವೆ" ಎಂದು ಖರ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ವಾದ್ರಾಗೆ ನೀಡಲಾಗುತ್ತಿರುವ ತೊಂದರೆ ಸರಿಯಲ್ಲ. ನಾವೆಲ್ಲರೂ ಅವರ ಒಳ್ಳೆಯ ಕೆಲಸವನ್ನು ಬೆಂಬಲಿಸುತ್ತೇವೆ." "ಭೂ ಜಿಹಾದ್" ನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಆರೋಪಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ಮುಖ್ಯಸ್ಥರು, "ಭೂ ಜಿಹಾದ್ ಎಂದರೇನು ಎಂದು ನನಗೆ ತಿಳಿದಿಲ್ಲ. ಅವರು ನನ್ನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಬಯಸಿದರೆ, ಸ್ವಾಗತ, ಅವರು ಅದನ್ನು ತೆಗೆದುಕೊಳ್ಳಲಿ. ಅವರು ಯಾವಾಗ ಕ್ರಮ ಕೈಗೊಂಡರೂ, ನಾನು ಅದಕ್ಕೆ ಪ್ರತಿಕ್ರಿಯಿಸುತ್ತೇನೆ" ಎಂದು ಹೇಳಿದ್ದಾರೆ.
Advertisement