
ನವದೆಹಲಿ: ಶಿಖೋಪುರ ಭೂ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿರುವ ಚಾರ್ಚ್ ಶೀಟ್ ವಿರುದ್ಧ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನನ್ನ ಭಾವನಿಗೆ ಕಳೆದ 10 ವರ್ಷಗಳಿಂದ ಕೇಂದ್ರ ಸರ್ಕಾರ ಹಿಂಸಿಸುತ್ತಿದ್ದು, ಇದೀಗ ದಾಖಲಾಗಿರುವ ಚಾರ್ಜ್ ಶೀಟ್ ಕೂಡ ಅದರ ಮುಂದುವರೆದ ಭಾಗವಾಗಿದೆ ಎಂದು ಹೇಳಿದ್ದಾರೆ.
ರಾಬರ್ಟ್, ಪ್ರಿಯಾಂಕಾ ಮತ್ತು ಅವರ ಮಕ್ಕಳು ಮತ್ತೊಂದು ದುರುದ್ದೇಶಪೂರಿತ, ರಾಜಕೀಯ ಪ್ರೇರಿತ ಅಪಪ್ರಚಾರ ಮತ್ತು ಕಿರುಕುಳವನ್ನು ಎದುರಿಸುತ್ತಿದ್ದು, ಈ ಸಂದರ್ಭದಲ್ಲಿ ನಾನು ಅವರೊಂದಿಗೆ ನಿಲ್ಲುತ್ತೇನೆ. ಅವರೆಲ್ಲರೂ ಯಾವುದೇ ರೀತಿಯ ಕಿರುಕುಳ, ಪರಿಸ್ಥಿತಿ ಎದುರಿಸಿರುವ ಧೈರ್ಯಶಾಲಿಗಳಾಗಿದ್ದಾರೆ, ಸತ್ಯ ಎಂದಿಗೂ ಮೇಲುಗೈ ಸಾಧಿಸುತ್ತದೆ ಎಂದು ತಿಳಿಸಿದ್ದಾರೆ.
2018 ರಲ್ಲಿ ನಡೆದಿದ್ದ ಶಿಖೋಪುರ ಭೂ ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾ, ಆಗಿನ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ರಿಯಲ್ ಎಸ್ಟೇಟ್ ದೈತ್ಯ ಡಿಎಲ್ಎಫ್ ಮತ್ತು ಆಸ್ತಿ ವ್ಯಾಪಾರಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆರೋಪಪಟ್ಟಿಯಲ್ಲಿ ರಾಬರ್ಟ್ ವಾದ್ರಾ ಅವರ ಕಂಪನಿಯಾದ ಸ್ಕೈಲೈಟ್ ಹಾಸ್ಪಿಟಾಲಿಟಿಯು 2008 ರಲ್ಲಿ 7.5 ಕೋಟಿ ರೂ.ಗೆ ಶಿಖೋಪುರದಲ್ಲಿ (ಈಗ ಸೆಕ್ಟರ್ 83) 3.53 ಎಕರೆ ಭೂಮಿಯನ್ನು ಖರೀದಿಸಿತು. ನಂತರ ಅದೇ ಭೂಮಿಯನ್ನು ಯೋಜನೆ ಪೂರ್ಣಗೊಳ್ಳದೆ 58 ಕೋಟಿ ರೂಪಾಯಿಗೆ ಮಾರಾಟ ಮಾಡಲಾಯಿತು. ನಂತರ ವಾದ್ರಾ ಅವರ ಕಂಪನಿಯು ಆ ಭೂಮಿಯನ್ನು ರಿಯಲ್ ಎಸ್ಟೇಟ್ ದೈತ್ಯ ಡಿಎಲ್‌ಎಫ್‌ಗೆ 58 ಕೋಟಿ ರೂ.ಗೆ ಮಾರಾಟ ಮಾಡಿತು. ಈ ಆದಾಯವು ಅಕ್ರಮ ವರ್ಗಾವಣೆ ಯೋಜನೆಯ ಭಾಗವಾಗಿರಬಹುದು ಎಂದು ಶಂಕಿಸಿರುವ ಕೇಂದ್ರ ಸಂಸ್ಥೆ, ಈ ಅನಿರೀಕ್ಷಿತ ಲಾಭದ ಹಿಂದಿನ ಹಣದ ಹಾದಿಯ ಕುರಿತು ತನಿಖೆ ನಡೆಸುತ್ತಿದೆ.
Advertisement