
ಲಖನೌ: ತನ್ನ ವಿಭಿನ್ನ ತೀರ್ಪುಗಳ ಮೂಲಕ ದೇಶಾದ್ಯಂತ ಗಮನ ಸೆಳೆದಿರುವ ಅಲಹಾಬಾದ್ ಹೈಕೋರ್ಟ್ ಮತ್ತೊಂದು ಮಹತ್ವದ ತೀರ್ಪು ನೀಡಿದೆ. ಒಮ್ಮೆ ಮದುವೆಯನ್ನು ಅನೂರ್ಜಿತಗೊಳಿಸುವ ಆದೇಶ ಹೊರಡಿಸಿದರೆ, ಮದುವೆಗೆ ಆರಂಭದಿಂದಲೂ ಮಾನ್ಯತೆ ಇಲ್ಲ ಎಂದೇ ಪರಿಗಣಿಸಲಾಗುತ್ತದೆ. ಅಂತಹ ಕೇಸ್ ಗಳಲ್ಲಿ ಮದುವೆಯು ಪ್ರಾರಂಭದಲ್ಲಿಯೇ ಕೊನೆಗೊಳ್ಳುವುದರಿಂದ ಪುರುಷನು ಹೆಂಡತಿಗೆ ಜೀವನಾಂಶ ಕೊಡುವ ಬಾಧ್ಯತೆ ಇರುವುದಿಲ್ಲ ಎಂದು ಹೇಳಿದೆ.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 11 ರ ಅಡಿಯಲ್ಲಿ ಮದುವೆಯನ್ನು ಅಮಾನ್ಯ ಮತ್ತು ಅನೂರ್ಜಿತ ಎಂದು ಘೋಷಿಸಿದಾಗ, ಅದನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪರಿಣಾಮವಾಗಿ ಹೆಂಡತಿಗೆ ಜೀವನಾಂಶ ಒದಗಿಸಲು ಪುರುಷನ ಮೇಲೆ ಯಾವುದೇ ಕಾನೂನು ಬಾಧ್ಯತೆ ಇರುವುದಿಲ್ಲ ಎಂದು ಹೇಳಿದೆ.
ಫೆಬ್ರವರಿ 2015 ರಲ್ಲಿ ವಿವಾಹವಾದ ದಂಪತಿಗೆ ಸೇರಿದ ಪ್ರಕರಣ ಇದಾಗಿದೆ. ಸ್ವಲ್ಪ ದಿನಗಳ ನಂತರ ದಂಪತಿ ನಡುವೆ ವಿರಸ ಉಂಟಾಗಿದ್ದು, ಪತಿಯ ವಿರುದ್ಧ IPCಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕಿರುಕುಳ, ದೌರ್ಜನ್ಯ ಆರೋಪವನ್ನು ಹೊರಿಸಿ ಪತ್ನಿ ಅನೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ನಂತರ ಪತಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ವಿಚಾರಣೆಯ ಸಂದರ್ಭದಲ್ಲಿ, ಪತ್ನಿ ಈ ಹಿಂದೆ ಮದುವೆಯಾಗಿದ್ದಳು. ಆ ಮಾಹಿತಿಯನ್ನು ಮದುವೆ ಆರಂಭದಲ್ಲಿ ಹೇಳಿರಲಿಲ್ಲ ಎಂದು ತಿಳಿದುಬಂದಿದೆ.
ಹೀಗಾಗಿ ಅವರ ಮದುವೆಯನ್ನು ಅಸಿಂಧು ಎಂದು ಘೋಷಿಸಬೇಕು ಎಂದು ಕೋರಿ ಪತಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದಕ್ಕೆ ಸಮ್ಮತಿಸಿದ ಕೌಟುಂಬಿಕ ನ್ಯಾಯಾಲಯ ನವೆಂಬರ್ 2021 ರಲ್ಲಿ ಅವರ ಮದುವೆಯನ್ನು ಅಮಾನ್ಯ ಮತ್ತು ಅನೂರ್ಜಿತ ಎಂದು ಘೋಷಿಸಿತು.
ಈ ತೀರ್ಪಿನ ವಿರುದ್ಧ ಪತ್ನಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ನಂತರ ಅವರ ಪ್ರಕರಣವನ್ನು ಹಿಂತೆಗೆದುಕೊಂಡಿದ್ದರು. ಇದರ ಹೊರತಾಗಿಯೂ ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ರ ಅಡಿಯಲ್ಲಿ ಜೀವನಾಂಶ ಕೋರಿದ್ದರು.
ಆಗಸ್ಟ್ 2022 ರಲ್ಲಿ, ಗಾಜಿಯಾಬಾದ್‌ನ ಸಿವಿಲ್ ನ್ಯಾಯಾಧೀಶರು ಕಾಯ್ದೆಯ ಸೆಕ್ಷನ್ 23 ರ ಅಡಿಯಲ್ಲಿ ತಿಂಗಳಿಗೆ ₹10,000 ನೀಡುವಂತೆ ತೀರ್ಪು ನೀಡಿದ್ದರು. ಪತಿ ಈ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ವಾದ ವಿವಾದಗಳನ್ನು ಆಲಿಸಿದ ನಂತರ ನ್ಯಾಯಮೂರ್ತಿ ರಾಜೀವ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ತೀರ್ಪು ನೀಡಿದೆ.
ಮೊದಲ ಮದುವೆಯು ಇನ್ನೂ ಕಾನೂನುಬದ್ಧವಾಗಿ ಮಾನ್ಯವಾಗಿರುವಾಗ ಪತ್ನಿ ಎರಡನೇ ಮದುವೆ ಆಗಿದ್ದಾಳೆ ಎಂಬ ಅಂಶಗಳನ್ನು ಪ್ರಮುಖವಾಗಿ ಪರಿಗಣಿಸಿದ ನ್ಯಾಯಾಲಯ, ಇದು ಹಿಂದೂ ಕಾನೂನಿನಡಿ ಅನುಮತಿ ನೀಡದ ಬಹುಪತ್ನಿತ್ವಕ್ಕೆ ಸಮಾನವಾಗಿದ್ದು, ಈ ಮದುವೆಯನ್ನು ಅಮಾನ್ಯ ಮತ್ತು ಅನೂರ್ಜಿತ ಎಂದು ಘೋಷಿರುವುದಾಗಿ ಆದೇಶಿಸಿತು.
ಒಂದು ಬಾರಿ ಮದುವೆ ಅನೂರ್ಜಿತ ಎಂದು ಘೋಷಿಸಿದ ನಂತರ ಕೌಟುಂಬಿಕ ಹಿಂಸಾಚಾರ ಕಾಯ್ದೆ 2005 ರ ಸೆಕ್ಷನ್ 2 (ಎಫ್) ಅಡಿಯಲ್ಲಿ ಯಾವುದೇ ಸಂಬಂಧ ಇರಲ್ಲ. ಆದ್ದರಿಂದ ಕಾನೂನುಬದ್ಧವಾಗಿ ಹೆಂಡತಿ ಜೀವನಾಂಶ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿತು.
Advertisement