
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಣ ಕದನ ವಿರಾಮ ಒಪ್ಪಂದ ಜಾರಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಚರ್ಚೆಗೆ ವಿಪಕ್ಷಗಳು ಒತ್ತಾಯಿಸುತ್ತಿರುವಂತೆಯೇ ಸಂಸತ್ತಿನಲ್ಲಿ 'ಆಪರೇಷನ್ ಸಿಂಧೂರ್ ' ನಂತಹ ಪ್ರಮುಖ ವಿಷಯಗಳ ಚರ್ಚೆಗೆ ಕೇಂದ್ರ ಸರ್ಕಾರ ಮುಕ್ತವಾಗಿರುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾನುವಾರ ಹೇಳಿದರು.
ಸರ್ವ ಪಕ್ಷ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿರಣ್ ರಿಜಿಜು, ಆಪರೇಷನ್ ಸಿಂಧೂರ್ ನಂತಹ ಪ್ರಮುಖ ವಿಷಯಗಳ ಚರ್ಚೆಗೆ ನಾವು ಅತ್ಯಂತ ಮುಕ್ತರಾಗಿದ್ದೇವೆ. ಇವುಗಳು ರಾಷ್ಟ್ರದ ಮಹತ್ವದ ವಿಚಾರಗಳಾಗಿವೆ. ಸರ್ಕಾರ ಎಂದಿಗೂ ದೂರ ಸರಿಯಲ್ಲ. ಆದರೆ, ನಿಯಮಗಳೊಂದಿಗೆ ಚರ್ಚೆಗೆ ಮುಕ್ತವಾಗಿದೆ ಎಂದು ಹೇಳಿದರು.
ನಿಯಮಗಳು ಮತ್ತು ಪರಂಪರೆಯಂತೆ ಚರ್ಚೆಗೆ ಆದ್ಯತೆ ನೀಡಲಾಗುವುದು, ಉಭಯ ಸದನಗಳ ಕಾರ್ಯ ಕಲಾಪ ಸಮಿತಿಯಲ್ಲಿ ಪ್ರಸ್ತಾಪಿಸಲಾದ ವಿಚಾರಗಳ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು, ಚಿಕ್ಕ ಪಕ್ಷಗಳು ಸೇರಿದಂತೆ ಎಲ್ಲರಿಗೂ ಸೂಕ್ತ ಸಮಯ ನೀಡಲು ಪ್ರಯತ್ನಿಸುತ್ತೇವೆ. ಸಂಸತ್ತಿನ ಸುಗಮ ಕಲಾಪಕ್ಕೆ ಅವಕಾಶ, ಸಹಕಾರ ನೀಡಬೇಕು ಎಂದು ಎಲ್ಲಾ ಪಕ್ಷಗಳಿಗೆ ಮನವಿ ಮಾಡಿದ ಅವರು, ಸಂಸತ್ತಿನ ಕಾರ್ಯ ಕಲಾಪಕ್ಕೆ ನೆರವಾಗುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.
ಈ ಮುಂಗಾರು ಅಧಿವೇಶನದಲ್ಲಿ ಪ್ರಮುಖ 17 ಮಸೂದೆಗಳನ್ನು ಮಂಡಿಸಲಾಗುವುದು, ಈ ಕುರಿತ ವಿವರಗಳನ್ನು ಶೀಘ್ರವಾಗಿ ನೀಡಲಾಗುವುದು ಎಂದು ಕಿರಣ್ ರಿಜಿಜು ತಿಳಿಸಿದರು.
ಸಂಸತ್ತಿನ ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾನುವಾರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಬಿಹಾರದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Bihar SIR) ಪಹಲ್ಗಾಮ್‌ನಲ್ಲಿನ ಇತ್ತೀಚಿನ ಭಯೋತ್ಪಾದಕ ದಾಳಿ ಮತ್ತು ಡೊನಾಲ್ಡ್ ಟ್ರಂಪ್ ಹೇಳಿಕೆ ಸೇರಿದಂತೆ ಹಲವು ವಿವಾದಾತ್ಮಕ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ.
ಟ್ರಂಪ್ ಅವರ ಹೇಳಿಕೆ ಮತ್ತು ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪ್ರಧಾನಿ ಮೋದಿ ಹೇಳಿಕೆ ನೀಡುವಂತೆ ಕಾಂಗ್ರೆಸ್ ಸೂಚಿಸಿರುವುದಾಗಿ ಪಕ್ಷದ ಲೋಕಸಭೆಯ ಉಪ ನಾಯಕ ಗೌರವ್ ಗೋಗೊಯ್ ಸುದ್ದಿಗಾರರಿಗೆ ಹೇಳಿದರು.
ಸರ್ವ ಪಕ್ಷ ಸಭೆಯಲ್ಲಿ ಗೋಗೊಯ್ ಪ್ರಸ್ತಾಪಿಸಿದ ವಿಷಯಗಳನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
Advertisement