
ಡೆಹ್ರಾಡೂನ್: ಕೈಲಾಸ ಮಾನಸ ಸರೋವರ ಯಾತ್ರೆಯ ವೇಳೆ ಟಿಬೆಟ್‌ನ ಡಾರ್ಚೆನ್‌ನಲ್ಲಿ ಕುದುರೆಯಿಂದ ಬಿದ್ದು ಬಿಜೆಪಿಯ ಹಿರಿಯ ನಾಯಕಿ ಹಾಗೂ ಕೇಂದ್ರದ ಮಾಜಿ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರ ಬೆನ್ನಿಗೆ ಗಂಭೀರ ಗಾಯವಾಗಿದೆ.
ನಂತರ ಅವರನ್ನು ಹವಾಮಾನ ವೈಪರೀತ್ಯದಿಂದಾಗಿ ದೆಹಲಿಗೆ ಸ್ಥಳಾಂತರಿಸುವುದು ವಿಳಂಬವಾಗಿದ್ದು, ಉತ್ತರಾಖಂಡದ ಗುಂಜಿಗೆ ಮರಳಿ ಕರೆತರಲಾಗಿದೆ.
ಭಾರತೀಯ ಯಾತ್ರಾರ್ಥಿಗಳ ಎರಡನೇ ಗುಂಪಿನಲ್ಲಿದ್ದ ಲೇಖಿ, ಟಿಬೆಟ್‌ನಲ್ಲಿ ಪ್ರಯಾಣಿಸುವಾಗ ಕುದುರೆ ಮೇಲಿಂದ ಬಿದ್ದಿದ್ದಾರೆ. ಇದರಿಂದ ಯಾತ್ರೆ ಮುಂದುವರೆಸಲು ಸಾಧ್ಯವಾಗಿಲ್ಲ. ಕೂಡಲೇ ಅವರನ್ನು ಲಿಪುಲೇಖ್ ಪಾಸ್‌ನ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ಐಟಿಬಿಪಿ) ನ 7 ನೇ ಬೆಟಾಲಿಯನ್ ಸಿಬ್ಬಂದಿ ರಕ್ಷಿಸಿದ್ದು, ನಂತರ ಗುಂಜಿಯಲ್ಲಿರುವ ಐಟಿಬಿಪಿ ಶಿಬಿರಕ್ಕೆ ಕರೆತಂದಿದ್ದಾರೆ.
ಸದ್ಯ ಅವರು ಗುಂಜಿ ಶಿಬಿರದಲ್ಲಿ ವೈದ್ಯಕೀಯ ನಿಗಾವಣೆಯಲ್ಲಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ವಿಮಾನ ಪ್ರಯಾಣ ಮಾಡಬಹುದಾಗಿದೆ. ಸೋಮವಾರ ನೇರವಾಗಿ ದೆಹಲಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement