
ನವದೆಹಲಿ: ನ್ಯಾಯಮೂರ್ತಿ ಯಶವಂತ್ ವರ್ಮಾ ಪದಚ್ಯುತಿಗೆ ಸಂಸತ್ತಿನಲ್ಲಿ ನಿರ್ಣಯ ಮಂಡಿಸುವ ನೋಟಿಸ್ ಗೆ ಈಗಾಗಲೇ 100 ಸಂಸದರು ಸಹಿ ಮಾಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾನುವಾರ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪದಚ್ಯುತಿ ನಿರ್ಣಯ ಮಂಡಿಸಲು ಬೇಕಾಗಿರುವ ಅಗತ್ಯ ಸಂಸದರ ಬೆಂಬಲವನ್ನು ಈಗಾಗಲೇ ಮೀರಿದೆ.
ಸರ್ವ ಪಕ್ಷ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಿರಣ್ ರಿಜಿಜು, ಸಹಿ ಸಂಗ್ರಹ ನಡೆಯುತ್ತಿದೆ. ಈಗಾಗಲೇ 100 ಸಂಸದರು ಸಹಿ ಹಾಕಿದ್ದಾರೆ. ಯಾವಾಗ ನಿರ್ಣಯವನ್ನು ಮಂಡಿಸಬೇಕು ಎಂಬುದನ್ನು ಕಾರ್ಯ ಕಲಾಪ ಸಮಿತಿ ನಿರ್ಧರಿಸಲಿದೆ ಎಂದು ತಿಳಿಸಿದರು.
ನ್ಯಾಯಾಧೀಶರ ಪದಚ್ಯುತಿಗೆ ಲೋಕಸಭೆಯಲ್ಲಿ ಕನಿಷ್ಠ 100 ಸಂಸದರು ಮತ್ತು ರಾಜ್ಯಸಭೆಯಲ್ಲಿ 50 ಸಂಸದರು ಸಹಿ ಹಾಕಬೇಕು. ಲೋಕಸಭೆಯಲ್ಲಿ ನಿರ್ಣಯ ಮಂಡಿಸುವ ಸಾಧ್ಯತೆ ಇದೆ.
ಸೋಮವಾರದಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುವುದರೊಂದಿಗೆ ಈ ಅಧಿವೇಶನದಲ್ಲಿಯೇ ನಿರ್ಣಯವನ್ನು ಮಂಡಿಸಲಾಗುವುದು ಎಂದು ಸರ್ಕಾರ ಸ್ಪಷ್ಪಪಡಿಸಿದೆ. ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ವಿರುದ್ಧದ ನಿರ್ಣಯಕ್ಕೆ ವಿಪಕ್ಷಗಳು ಸೇರಿದಂತೆ ವಿವಿಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿವೆ.
ಅಧಿವೇಶನದ ಮೊದಲ ವಾರದಲ್ಲಿಯೇ ನಿರ್ಣಯವನ್ನು ಮಂಡಿಸಲಾಗುತ್ತದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಕಿರಣ್ ರಿಜಿಜು, ಇದನ್ನು ಸಂಸತ್ತಿನ ಕಾರ್ಯ ಕಲಾಪ ಸಮಿತಿ ನಿರ್ಧರಿಸಲಿದೆ ಎಂದು ಹೇಳಿದರು.
ಇದಕ್ಕೂ ಮುನ್ನಾ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಚಿವರು, ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಪದಚ್ಯುತಿಗೆ ಎಲ್ಲಾ ರಾಜಕೀಯ ಪಕ್ಷಗಳಿಂದ ಬೆಂಬಲ ವ್ಯಕ್ತವಾಗಿರುವುದಾಗಿ ತಿಳಿಸಿದರು.
Advertisement