
ತಿರುವನಂತಪುರಂ: ದೇಶದ ಭದ್ರತೆ ವಿಚಾರದಲ್ಲಿ ಶಶಿ ತರೂರ್ ತನ್ನ ನಿಲುವು ಬದಲಾಯಿಸಿಕೊಳ್ಳುವವರೆಗೂ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಆಯೋಜಿಸುವ ಪಕ್ಷದ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುರಳೀಧರನ್, ತರೂರ್ ಅವರ ಇತ್ತೀಚಿನ ಹೇಳಿಕೆಗಳು ಪಕ್ಷದ ಸಾಮೂಹಿಕ ನಿಲುವಿನಿಂದ ಅವರನ್ನು ದೂರವಿಟ್ಟಿದೆ. ಅವರು ನಮ್ಮೊಂದಿಗಿಲ್ಲ, ಹೀಗಾಗಿ ಅವರು ಕಾರ್ಯಕ್ರಮ ಬಹಿಷ್ಕರಿಸುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಾದಿಸಿದರು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಸೇರಿದಂತೆ ಇತ್ತೀಚಿನ ದೇಶದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ಶಸಾಸ್ತ್ರ ಪಡೆಯನ್ನು ಬಹಿರಂಗವಾಗಿ ಬೆಂಬಲಿಸಿದ ಶಶಿ ತರೂರ್ ಬಗ್ಗೆ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿರುವಂತೆಯೇ ಕೆ.ಮುರಳೀಧರನ್ ಈ ರೀತಿಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಕೊಚ್ಚಿಯಲ್ಲಿ ಶನಿವಾರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಶಶಿ ತರೂರ್, ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಕಾಂಗ್ರೆಸ್ ನಾಯಕರೊಂದಿಗೆ ತಮ್ಮ ಭಿನ್ನಾಭಿಪ್ರಾಯದ ನಡುವೆ, ಸಂಸದ ಶಶಿ ತರೂರ್, ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಕೆಲವೊಮ್ಮೆ ಇತರ ಪಕ್ಷಗಳೊಂದಿಗೆ ಸಹಕರಿಸುವುದು ಅಗತ್ಯವಾಗುತ್ತದೆ ಎಂದು ಹೇಳಿದ್ದರು.
ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂತಹ ಹೇಳಿಕೆ ನೀಡುತ್ತಿರುವ ಶಶಿ ತರೂರ್, ತನ್ನ ನಿಲುವು ಬದಲಾಯಿಸಿಕೊಳ್ಳುವವರೆಗೂ ತಿರುವನಂತಪುರಂನಲ್ಲಿ ಆಯೋಜಿಸುವ ಯಾವುದೇ ಕಾಂಗ್ರೆಸ್ ಸಮಾರಂಭಕ್ಕೂ ಕರೆಯಲ್ಲ ಎಂದು ಮುರಳೀಧರನ್ ಹೇಳಿದರು. ತರೂರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಪಕ್ಷದ ರಾಷ್ಟ್ರೀಯ ನಾಯಕರಿಗೆ ಬಿಟ್ಟ ವಿಚಾರ ಎಂದರು.
ಕೇರಳ ಸಿಎಂ ಸ್ಥಾನಕ್ಕೆ ಶಶಿ ತರೂರ್ UDF ನ ಟಾಪ್ ಆಯ್ಕೆ ಎಂದು ಸೂಚಿಸುವ ಸಮೀಕ್ಷೆಯೊಂದನ್ನು ತರೂರ್ ಹಂಚಿಕೊಂಡ ನಂತರ ಅಸಮಾಧಾನ ಮತ್ತಷ್ಟು ಹೆಚ್ಚಾಗಿದೆ. ತರೂರ್ ಯಾವ ಪಕ್ಷಕ್ಕೆ ಸೇರಿದವರು ಎಂಬುದನ್ನು ಮೊದಲು ನಿರ್ಧರಿಸಬೇಕು ಎಂದು ಮುರಳೀಧರನ್ ಟೀಕಿಸಿದ್ದಾರೆ.
ಮಲಯಾಳಂ ದೈನಿಕದಲ್ಲಿ ಇಂದಿರಾ ಗಾಂಧಿ ಮತ್ತು ತುರ್ತು ಪರಿಸ್ಥಿತಿ ಕುರಿತಾದ ಶಶಿ ತರೂರ್ ಅವರ ಲೇಖನ ಪ್ರಕಟವಾದ ನಂತರ ಅವರ ವಿರುದ್ಧ ಕಾಂಗ್ರೆಸ್ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಶಶಿ ತರೂರ್ ಅವರು ಕಾಂಗ್ರೆಸ್‌ನೊಳಗೆ ಮುಂದುವರಿಯಬೇಕೆ ಅಥವಾ ಸ್ವತಂತ್ರ ರಾಜಕೀಯ ಮಾರ್ಗವನ್ನು ಅನುಸರಿಸಬೇಕೆ ಎಂದು ಅವರೇ ನಿರ್ಧರಿಸಲಿ ಎಂದು ಮುರುಳೀಧರನ್ ಈ ಹಿಂದೆ ಹೇಳಿದ್ದರು.
Advertisement