
ಶಿಮ್ಲಾ: ಹಿಮಾಚಲ ಪ್ರದೇಶದ ಶಿಲ್ಲೈ ಗ್ರಾಮದಲ್ಲಿ ಒಂದೇ ಯುವತಿಯನ್ನು ಇಬ್ಬರು ಸಹೋದರರು ಮದುವೆಯಾಗಿದ್ದು, ಬಹುಪತಿತ್ವದ ಪುರಾತನ ಸಾಂಪ್ರದಾಯಿಕ ಆಚರಣೆಗೆ ನೂರಾರು ಜನ ಸಾಕ್ಷಿಯಾದರು.
ಹಿಮಾಚಲ ಪ್ರದೇಶದ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಹಟ್ಟಿ ಸಮುದಾಯದ ಶತಮಾನಗಳಷ್ಟು ಹಳೆಯ ಬಹು ಪತಿತ್ವ ಸಂಪ್ರದಾಯವನ್ನು ಉಳಿಸಲು ಮುಂದಾಗಿರುವ ಸಹೋದರರಿಬ್ಬರು, ಒಂದೇ ಹುಡುಗಿಯನ್ನು ಮದುವೆಯಾಗಿದ್ದಾರೆ.
ಹಟ್ಟಿ ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಹಿಮಾಚಲ ಪ್ರದೇಶದ ಶಿಲೈ ಗ್ರಾಮದಲ್ಲಿ ಈ ವಿವಾಹವು ನೆರವೇರಿದ್ದು, ಸಹೋದರಾದ ಪ್ರದೀಪ್ ಮತ್ತು ಕಪಿಲ್, ಸುನೀತಾ ಎಂಬುವರನ್ನು ವರಿಸಿದ್ದಾರೆ. ಮೂವರು ಒಟ್ಟಿಗೆ ಸೇರಿ ತೆಗೆದುಕೊಂಡ ನಿರ್ಧಾರವಿದು ಎಂದು ವರ ಪ್ರದೀಪ್ ಹೇಳಿದ್ದಾರೆ. ನಮ್ಮ ಮೂಲದ ಬಗ್ಗೆ ನಮಗೆ ಹೆಮ್ಮೆಯಿದೆ. ಅದಕ್ಕಾಗಿಯೇ ಬಹಿರಂಗವಾಗಿ ನಮ್ಮ ಸಂಪ್ರದಾಯವನ್ನು ಅಪ್ಪಿಕೊಂಡಿದ್ದೇವೆ ಎಂದಿದ್ದಾರೆ. ಶಿಲ್ಲೈ ಗ್ರಾಮದ ಪ್ರದೀಪ್ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಕಿರಿಯ ಸಹೋದರ ಕಪಿಲ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ನಾನು ವಿದೇಶದಲ್ಲಿರಬಹುದು. ಆದರೆ, ಮೂವರು ಒಂದಾಗಿ ಸಂಸಾರವನ್ನು ಸಾಗಿಸುತ್ತೇವೆ. ಸಂಪ್ರದಾಯ ಉಳಿಸುವ ಈ ಪಯಣದಲ್ಲಿ ಒಬ್ಬರಿಗೊಬ್ಬರು ಸಹಕಾರ ನೀಡುತ್ತೇವೆ ಎಂದು ಕಪಿಲ್ ಹೇಳಿದ್ದಾರೆ. ಇದು ಸಂಪೂರ್ಣವಾಗಿ ನನ್ನ ಆಯ್ಕೆಯಾಗಿತ್ತು. ಯಾರ ಒತ್ತಾಯದಿಂದ ಈ ನಿರ್ಧಾರ ಮಾಡಿಲ್ಲ. ನನಗೆ ನನ್ನ ಸಂಪ್ರದಾಯದ ಬಗ್ಗೆ ಹೆಮ್ಮೆ ಇದೆ. ಆದ್ದರಿಂದ ಇದನ್ನು ಸ್ವಇಚ್ಛೆಯಿಂದ ಆರಿಸಿಕೊಂಡೆ ಎಂದು ವಧು ಸುನೀತಾ ಹೇಳಿದ್ದಾರೆ.
ಈ ವಿವಾಹ ಸಮಾರಂಭವು ಸಿರ್ಮೌರ್ ಜಿಲ್ಲೆಯ ಗಿರಿಯಾಚಗಿನ ಪ್ರದೇಶದಲ್ಲಿ ಜುಲೈ 12 ರಂದು ಆರಂಭವಾಗಿ ಮೂರು ದಿನಗಳ ಕಾಲ ನಡೆಯಿತು. ಸ್ಥಳೀಯ ಜಾನಪದ ಗೀತೆಗಳು ಮತ್ತು ನೃತ್ಯಗಳು ಸಮಾರಂಭಕ್ಕೆ ಮೆರುಗು ತಂದವು. ಈ ವಿವಾಹದ ವಿಡಿಯೊಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.
ಇದೇನು ಮೊದಲ ವಿವಾಹವಲ್ಲ. ಇಂತಹ ವಿವಾಹಗಳು ಸದ್ದಿಲ್ಲದೇ ನಡೆಯುತ್ತಿರುತ್ತವೆ. ನಮ್ಮ ಹಳ್ಳಿಯಲ್ಲಿ ಇಬ್ಬರು ಅಥವಾ ಮೂವರು ಸಹೋದರರು ಒಬ್ಬಳೇ ಹೆಂಡತಿಯನ್ನು ಹೊಂದಿದ್ದಾರೆ. ಈ ವಿವಾಹದ ವಿಶೇಷತೆ ಏನೆಂದರೆ, ಸಂಪ್ರದಾಯವನ್ನು ಹೆಮ್ಮೆಯಿಂದ ಒಪ್ಪಿಕೊಂಡು ಬಹಿರಂಗವಾಗಿ ಆಗಿರುವುದು ಎಂದು ಶಿಲೈ ಗ್ರಾಮದ ನಿವಾಸಿ ಬಿಶನ್ ತೋಮರ್ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಬಹುಪತಿತ್ವ ಸಾಮಾನ್ಯ ಆಚರಣೆಯಾಗಿದ್ದು, ಪೂರ್ವಜರ ಭೂಮಿ ವಿಭಜನೆಯಾಗದಂತೆ ತಡೆಯಲು, ಹೆಣ್ಣು ವಿಧವೆಯಾಗುವುದನ್ನು ತಪ್ಪಿಸುವುದಕ್ಕೆ ಪೂರ್ವಜರು ಕಂಡುಕೊಂಡ ಮಾರ್ಗವಿದು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಹಟ್ಟಿ ಸಮುದಾಯವು ಹಿಮಾಚಲ ಪ್ರದೇಶ-ಉತ್ತರಾಖಂಡ ಗಡಿಯಲ್ಲಿ ವಾಸಿಸುವ ಬುಡಕಟ್ಟು ಸಮುದಾಯವಾಗಿದ್ದು, ಮೂರು ವರ್ಷಗಳ ಹಿಂದೆ ಪರಿಶಿಷ್ಟ ಪಂಗಡವೆಂದು ಘೋಷಿಸಲಾಗಿದೆ. ಈ ಸಮುದಾಯದಲ್ಲಿ ಬಹುಪತಿತ್ವವು ಶತಮಾನಗಳಿಂದ ಪ್ರಚಲಿತವಾಗಿತ್ತು. ಆದರೆ, ಮಹಿಳೆಯರಲ್ಲಿ ಸಾಕ್ಷರತೆಯ ಏರಿಕೆ ಮತ್ತು ಸಮುದಾಯಗಳ ಆರ್ಥಿಕ ಅಭಿವೃದ್ಧಿಯಿಂದಾಗಿ ಇಂತಹ ವಿವಾಹಗಳ ಸಂಖ್ಯೆ ಕಡಿಮೆಯಾಗಿತ್ತು. ಈಗಲೂ ಕೆಲವು ವಿವಾಹಗಳು ರಹಸ್ಯವಾಗಿ ನಡೆಯಲಿದ್ದು, ಸಮಾಜ ಈ ವಿವಾಹವನ್ನು ಸ್ವೀಕರಿಸುತ್ತದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
Advertisement