
ಬೆಳಗಾವಿ: ಸ್ವಾಮೀಜಿಗಳು ಎಂದ ಕೂಡಲೇ ಮಂತ್ರ ಪಠಣ, ಪ್ರವಚನ, ಕೀರ್ತನೆ ಮಾಡುತ್ತ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುವವರು ಎಂದು ತಿಳಿಯುತ್ತೇವೆ. ಆದರೆ, ಅದೆಷ್ಟೋ ಸ್ವಾಮೀಜಿಗಳು ಈ ಕೆಲಸಗಳ ಜೊತೆ ದೇಶಕ್ಕೆ, ಸಮಾಜಕ್ಕೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅಂತಹವರಲ್ಲಿ ಇಂಚಗೇರಿ ಮಠದ ಶ್ರೀ ಮಾಧವಾನಂದ ಕೂಡ ಒಬ್ಬರಾಗಿದ್ದಾರೆ.
ಇವರು ದೇಶಕ್ಕೆ ಸಮಸ್ಯೆ ಆದಾಗ ಗುಂಡೇಟಿಗೂ ಹೆದರದೆ, 20 ಸಾವಿರ ಹೋರಾಟಗಾರರೊಂದಿಗೆ ಬ್ರಿಟಿಷರ ಹೆಡೆಮುರಿ ಕಟ್ಟಲು ಮುಂದಾಗಿದ್ದರು. ದೇಶದಲ್ಲಿ ಜಾತಿ ಕಿಚ್ಚು ಹೆಚ್ಚಿದಾಗ ಅಂತರ್ಜಾತಿ ವಿವಾಹ ಮಾಡಿಸುವ ಮೂಲಕ ಜಾತ್ಯತೀತತೆಗೆ ನಾಂದಿ ಹಾಡಿದ್ದರು. ಇಂಚಗೇರಿ ಮಠವನ್ನು ಜಾತ್ಯಾತೀತ ಮಠವನ್ನಾಗಿ ರೂಪಿಸಿದ ಕೀರ್ತಿ ಶ್ರೀ ಮಾಧವಾನಂದ ದೇವರಿಗೆ ಸಲ್ಲುತ್ತದೆ.
ವಿಶೇಷವೆಂದರೆ 200 ವರ್ಷಗಳ ಹಿಂದೆ ಗುರುಲಿಂಗ ಜಂಗಮ ಮಹಾರಾಜರಿಂದ ಸ್ಥಾಪನೆಯಾದ ಈ ಮಠದ ತತ್ವಾದರ್ಶಗಳಿಗೆ ವಿದೇಶಿಯರೂ ಬೆರಗಾಗಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿರುವ ಇಂಚಗೇರಿ ಗ್ರಾಮವು, ಇಡೀ ದಕ್ಷಿಣ ಭಾರತದ ಶ್ರೇಷ್ಟ ಭಕ್ತಿ ಪಂಥಗಳೊಲ್ಲೊಂದಾಗಿದೆ. ಈ ಮಠವು ಮಠವು ಕೋಮು ಸಾಮರಸ್ಯ ಉದಾಹರಣೆಯಾಗಿದೆ. ಮಠವು ಕಳೆದ 50 ವರ್ಷಗಳಿಂದ ಅಂತರಜಾತಿ ಮತ್ತು ಅಂತರಧರ್ಮದ ವಿವಾಹಗಳನ್ನು ಆಯೋಜಿಸುತ್ತಿದೆ. ಈ ವಿಶಿಷ್ಟ ಸಂಪ್ರದಾಯಕ್ಕೆ ಅಡಿಪಾಯ ಹಾಕಿದ್ದು ಐದು ದಶಕಗಳ ಹಿಂದೆ ಇದರ ದಾರ್ಶನಿಕ ಮತ್ತು ಕ್ರಾಂತಿಕಾರಿ ಸಾಧು ಸಂತ ಮಾಧವಾನಂದರವರು.
1915 ರಲ್ಲಿ ಜನಿಸಿದ ಮಾಧವಾನಂದರು ಚಿಕ್ಕ ವಯಸ್ಸಿನಲ್ಲಿಯೇ ದೀಕ್ಷೆ ಪಡೆದರು. ತಮ್ಮ ಕ್ರಾಂತಿಕಾರಿ ವಿಚಾರಗಳೊಂದಿಗೆ, ಮಠವನ್ನು ಸಮಾಜದ ಎಲ್ಲಾ ವರ್ಗಗಳಲ್ಲಿ ಜನಪ್ರಿಯಗೊಳಿಸಿ, ಸಾಮಾಜಿಕ ಸುಧಾರಣೆಗಳನ್ನು ತಂದರು.
ಅಂತರಜಾತಿ ಮತ್ತು ಅಂತರಧರ್ಮದ ವಿವಾಹಗಳನ್ನು ಆಯೋಜಿಸುವುದಕ್ಕೆ ಹೆಸರುವಾಸಿಯಾಗಿರುವ ಇಂಚಗಿರಿ ಮಠವು, ಇತ್ತೀಚೆಗೆ ಮಾಧವಾನಂದ ಶ್ರೀಗಳು ಪ್ರಾರಂಭಿಸಿದ ಈ ವಿಶಿಷ್ಟ ಸಂಪ್ರದಾಯದ 50 ನೇ ವಾರ್ಷಿಕೋತ್ಸವವನ್ನು ಆಚರಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಠದ ಸಂಚಾಲಕ ಮುಕುಂದ್ ಬೆಳಗಲಿ ಅವರು, ಮಾಧವಾನಂದರು 12ನೇ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ತತ್ವಗಳನ್ನು ಆಧರಿಸಿದ ಆಮೂಲಾಗ್ರ ಮಾರ್ಗವನ್ನು ಆರಿಸಿಕೊಂಡರು. ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದರು. 1974 ರಲ್ಲಿ ಮಠದಲ್ಲಿ ಮೊದಲ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹ ಸಮಾರಂಭವನ್ನು ಆಯೋಜಿಸಿದರು, ಈ ವೇಳೆ 10 ಜೋಡಿಗಳು ವಿವಾಹವಾದರು ಎಂದು ಹೇಳಿದರು.
ವಿರೋಧ ಮತ್ತು ತೀವ್ರ ಟೀಕೆಗಳ ನಡುವೆಯೂ ಮಠವು ಕಳೆದ ಐದು ದಶಕಗಳಲ್ಲಿ ಸುಮಾರು 25,000 ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹಗಳನ್ನು ಆಯೋಜಿಸಿದೆ. ಮಾಧವಾನಂದರು ಮೊಮ್ಮಗಳನ್ನೇ ಮುಸ್ಲಿಂ ಯುವಕನ ಜೊತೆ ವಿವಾಹ ಮಾಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು. ಇದು ಜಾತ್ಯತೀತತೆಯ ಬಲವಾದ ಸಂದೇಶವಾಗಿತ್ತು. ಅದು ಮಠವು ಪ್ರಗತಿಪರ ಶಕ್ತಿಯಾಗಿ ಹೊರಹೊಮ್ಮಲು ಸಹಾಯ ಮಾಡಿತು ಎಂದು ತಿಳಿಸಿದರು.
ಮಠಕ್ಕೆ ಆಯ್ಕೆಯಾದ ಸ್ವಾಮೀಜಿಗಳನ್ನೂ ಸಹ ವಿವಿಧ ಜಾತಿಗಳು ಅಥವಾ ಸಮುದಾಯಗಳಿಂದ ಆಯ್ಕೆ ಮಾಡಲಾಗುತ್ತದೆ ಎಂದು ಬೆಳಗಲಿ ಅವರು ಮಾಹಿತಿ ನೀಡಿದ್ದಾರೆ.
ಮಠದ ಪ್ರಮುಖ ಪದಾಧಿಕಾರಿ ಷಡಕ್ಷರಿ ಕಂಪುನವರ್ ಮಾತನಾಡಿ, ಸ್ವಾಮೀಜಿಗಲು ಆಯ್ಕೆ ಮಾಡಿದವರನ್ನೇ ಶಿಷ್ಯರು ಸಂಗಾತಿಯನ್ನಾಗಿ ಸ್ವೀಕರಿಸುತ್ತಿದ್ದಾರೆ. ಇಲ್ಲಿಯವರೆಗೆ ಸ್ವಾಮೀಜಿಗಳ ಆಯ್ಕೆಯನ್ನು ಯಾರೂ ಪ್ರಶ್ನಿಸಿಲ್ಲ. ವಧುಗಳು ಅಥವಾ ವರರನ್ನು ಹುಡುಕುವವರು ಅವರ ನಿರ್ಧಾರವನ್ನು ಹಿಂಜರಿಕೆಯಿಲ್ಲದೆ ಸ್ವೀಕರಿಸುತ್ತಾರೆಂದು ಹೇಳಿದ್ದಾರೆ.
ಬೇರೆ ಜಾತಿಯ ಮಹಿಳೆಯನ್ನು ಮದುವೆಯಾದ ಕಂಪುನವರ್ ಎಂಬುವವರು ಮಾತನಾಡಿ, ಆಕೆಯನ್ನು ಸ್ವಾಮೀಜಿ ಆಯ್ಕೆ ಮಾಡಿದ್ದರು. ಆಕೆ ಯಾರು ಮತ್ತು ಯಾವ ಸಮುದಾಯದಿಂದ ಬಂದವರು ಎಂದು ನನಗೆ ತಿಳಿದಿರಲಿಲ್ಲ. ಸ್ವಾಮೀಜಿಗಳ ನಿರ್ಧಾರವನ್ನು ನಾನು ಪೂರ್ಣ ಹೃದಯದಿಂದ ಒಪ್ಪಿಕೊಂಡೆ ಎಂದು ಹೇಳಿದ್ದಾರೆ.
ಮಾಧವಾನಂದ ಶ್ರೀಗಳು ಸ್ವಾತಂತ್ರ್ಯ ಹೋರಾಟಗಾರರೂ ಕೂಡ ಆಗಿದ್ದರು. ಸ್ವಾತಂತ್ರ್ಯ ಹೋರಾಟವು ಉತ್ತುಂಗದಲ್ಲಿದ್ದಾಗ, ಅವರು ಬ್ರಿಟಿಷ್ ಸೈನಿಕರ ವಿರುದ್ಧ ಹೋರಾಡಲು ಜನರನ್ನು ಸಜ್ಜುಗೊಳಿಸಿದ್ದರು. ಅಲ್ಲದೆ, ಹಿಂದಿನ ಬಿಜಾಪುರ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ಸಂಗ್ರಹಾಲಯ ಮತ್ತು ಬಂದೂಕು ತಯಾರಿಸುವ ಘಟಕವನ್ನು ಸ್ಥಾಪಿಸಿದ್ದರು. ಈ ಘಟಕವು ಕಚ್ಚಾ ಬಾಂಬ್‌ಗಳನ್ನೂ ಕೂಡ ತಯಾರಿಸಿತ್ತು. ಸ್ವಾತಂತ್ರ್ಯ ಹೋರಾಡದ ವೇಳೆ ಜನರು ಹಲವಾರು ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ತೆಗೆದುಕೊಂಡು ಹೋಗಿದ್ದರು.
ಸ್ವಾತಂತ್ರ್ಯಾನಂತರ, ಮಾಧವಾನಂದರ ನೇತೃತ್ವದಲ್ಲಿ ಮಠವು ಕರ್ನಾಟಕದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿತು. ಶ್ರೀಗಳು ಶಾಂತಿಯುತ ಆಂದೋಲನಗಳನ್ನು ಪ್ರಾರಂಭಿಸಿ, ಕನ್ನಡ ಮಾತನಾಡುವ ಎಲ್ಲಾ ಪ್ರದೇಶಗಳನ್ನು ಒಟ್ಟಿಗೆ ಸೇರಿಸಲು 21 ದಿನಗಳ ಉಪವಾಸ ಮಾಡಿದರು. ಅವರ ಪ್ರಯತ್ನಗಳು ಜಮಖಂಡಿ, ಜಾತ್, ರಾಮದುರ್ಗ ಮತ್ತು ಮೈಸೂರು ರಾಜ್ಯದ ಕೆಲವು ಭಾಗಗಳನ್ನು ಕರ್ನಾಟಕದೊಂದಿಗೆ ಏಕೀಕರಿಸಲು ಕಾರಣವಾಯಿತು ಎಂದು ತಿಳಿಸಿದ್ದಾರೆ.
ಮಠವು ಸಾಮೂಹಿಕ ಕೃಷಿ ಮತ್ತು "ಅನ್ನ ದಾಸೋಹ" (ಸಮುದಾಯ ಭೋಜನ) ದಂತಹ ಸರ್ವೋದಯ ಉಪಕ್ರಮಗಳನ್ನೂ ಉತ್ತೇಜಿಸುತ್ತಿದೆ. ಇವು ಬಡವರನ್ನು, ವಿಶೇಷವಾಗಿ ಕಡು ಬಡತನದಲ್ಲಿರುವವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿವೆ.
1980 ರಲ್ಲಿ ಮಾಧವಾನಂದರ ಮರಣದ ನಂತರವೂ ಶ್ರೀಗಳು ನಡೆಸಿಕೊಂಡು ಬಂದ ಪರಂಪರೆ ಮುಂದುವರೆಸಲಾಗುತ್ತಿದೆ. ಸಾಮೂಹಿಕ ವಿವಾಹಗಳನ್ನು ಆಯೋಜಿಸುವುದರ ಜೊತೆಗೆ, ವೈವಾಹಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ದಂಪತಿಗಳಿಗೆ ನೆರವು ನೀಡುತ್ತಿದೆ. ಅಂತರ್ಜಾತಿ ದಂಪತಿಗಳಿಗೆ ಆರ್ಥಿಕ ಮತ್ತು ಕಾನೂನು ಬೆಂಬಲವನ್ನು ಒದಗಿಸಲಾಗುತ್ತಿದೆ. ಅವರ ಸಾಮಾಜಿಕ ಏಕೀಕರಣವನ್ನು ಖಚಿತಪಡಿಸುತ್ತದೆ.
ಧಾರ್ಮಿಕ ಕೇಂದ್ರಗಳು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಬಹುದು ಮತ್ತು ಅದರ ಸಮಗ್ರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಬಹುದು ಎಂಬುದಕ್ಕೆ ಇಂಚಗಿರಿ ಮಠ ಸಾಕ್ಷಿಯಾಗಿದೆ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ವಿಭಜನೆಗಳು ದೇಶವನ್ನು ಕಾಡುತ್ತಿದ್ದು, ಈ ಸಮಯದಲ್ಲಿ ನಮ್ಮ ಮಠವು ಸುಧಾರಣೆಗಳು, ಸಾರ್ವತ್ರಿಕ ಪ್ರೀತಿ ಮತ್ತು ಸಹೋದರತ್ವದ ಸಂದೇಶವನ್ನು ಹರಡುವ ಮೂಲಕ ಜನರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದೆ ಎಂದು ಬೆಳಗಲಿ ಅವರು ಹೇಳಿದ್ದಾರೆ.
Advertisement