
ರಾಂಚಿ: ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ಎರಡು ವರ್ಷದ ಬಾಲಕಿ ಮೇಲೆ ದೂರದ ಸಂಬಂಧಿಯೊಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಚಿನಿಯಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 22 ವರ್ಷದ ಆರೋಪಿಯನ್ನು ಬಂಧಿಸಲಾಗಿದ್ದು, ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯ ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಆರೋಪಿಯನ್ನು ಮಂಗಳವಾರ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ ಎಂದು ಗರ್ವಾದ ಉಪವಿಭಾಗೀಯ ಪೊಲೀಸ್ ಅಧಿಕಾರಿ (SDPO) ರೋಹಿತ್ ರಂಜನ್ ಸಿಂಗ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಸೋಮವಾರ ಸಂತ್ರಸ್ತೆಯ ತಂದೆ ಆಕೆಯನ್ನು ಕರೆದುಕೊಂಡು ತಮ್ಮ ಗ್ರಾಮದಲ್ಲಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ಬಳಿ ಹೋಗಿದ್ದರು. ಆರೋಪಿ ಕೂಡ ಅಲ್ಲಿಗೆ ತಲುಪಿದನು. ಆತ ಬಾಲಕಿಯನ್ನು ಕರೆದುಕೊಂಡು ಅಲ್ಲಿಂದ ಹೊರಟಿದ್ದಾನೆ. ಬಾಲಕಿ ತಂದೆ ಆಕೆಯನ್ನು ಆರೋಪಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾನೆಂದು ಭಾವಿಸಿದ್ದಾರೆ. ಆದರೆ, ದಾರಿಯಲ್ಲಿ ನಿರ್ಜನ ಪ್ರದೇಶದಲ್ಲಿ ಆರೋಪಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಿಂಗ್ ಎಫ್‌ಐಆರ್ ಉಲ್ಲೇಖಿಸಿ ಹೇಳಿದ್ದಾರೆ.
ಸಂತ್ರಸ್ತೆ ಮನೆಗೆ ತಲುಪದಿದ್ದಾಗ ಆಕೆಯ ಕುಟುಂಬ ಸದಸ್ಯರು ಆಕೆಯನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆರೋಪಿ ಆಕೆಯನ್ನು ನಂತರ ಮನೆಗೆ ಕರೆದೊಯ್ದಿದ್ದಾನೆ. ಆದರೆ, ಏನೂ ಹೇಳದೆ ಸ್ಥಳದಿಂದ ಹೊರಟುಹೋಗಿದ್ದಾನೆ.
ಬಾಲಕಿ ಅಳುತ್ತಿದ್ದದ್ದನ್ನು ಕಂಡ ಕುಟುಂಬಸ್ಥರು ಅನುಮಾನಗೊಂಡು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಕೃತ್ಯ ಬೆಳಕಿಗೆ ಬಂದಿದೆ. ಘಟನೆ ಪೊಲೀಸರ ಗಮನಕ್ಕೆ ಬಂದ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು SDPO ಹೇಳಿದರು.
Advertisement