
ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಿಂದ (SIR) ಸುಮಾರು 52 ಲಕ್ಷ ಮತದಾರರ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಮಂಗಳವಾರ ಹೇಳಿದೆ. ಇವರೆಲ್ಲ ಮೃತಪಟ್ಟವರು ಅಥವಾ ಶಾಶ್ವತವಾಗಿ ವರ್ಗಾವಣೆಗೊಂಡವರು ಅಥವಾ ಹಲವು ಕಡೆಗಳಲ್ಲಿ ನೋಂದಣಿಯಾದವರು ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ ಎಂದು ಆಯೋಗ ತಿಳಿಸಿದೆ.
ಈ ಸಂಬಂಧ ಮಂಗಳವಾರ ಹೇಳಿಕೆ ಹೊರಡಿಸಿರುವ ECI, ಪ್ರಾಥಮಿಕ ಪರಿಷ್ಕರಣೆ ಕಾರ್ಯದಲ್ಲಿ 18.66 ಲಕ್ಷ ಮತದಾರರು ಮೃತಪಟ್ಟವರು, 26.01 ಲಕ್ಷ ಮಂದಿ ಶಾಶ್ವತವಾಗಿ ವಲಸೆ ಹೋದವರಾಗಿದ್ದಾರೆ. 7.5 ಲಕ್ಷ ಮಂದಿ ನಕಲಿಯಾಗಿ ಹೆಸರು ನೋಂದಾಯಿಸಿಕೊಂಡಿದ್ದವರಾಗಿದ್ದಾರೆ. 11,484 ಮತದಾರರನ್ನು ಪತ್ತೆ ಹಚ್ಚಲಾಗಿಲ್ಲ ಎಂದು ಹೇಳಿದೆ.
ಜೂನ್ 24 ರ ಹೊತ್ತಿಗೆ ಬಿಹಾರದಲ್ಲಿ ಒಟ್ಟು 7.89 ಕೋಟಿ ನೋಂದಾಯಿತ ಮತದಾರರಿದ್ದರು. ಶೇ. 90.67 ರಷ್ಟು ಮತದಾರರು (7.16 ಕೋಟಿ) ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ (EFS) ಸಲ್ಲಿಸಿದ್ದಾರೆ. ಈ ಅರ್ಜಿಗಳಲ್ಲಿ ಶೇ. 90.37 ರಷ್ಟು (7.13 ಕೋಟಿ) ಡಿಜಿಟಲೀಕರಣಗೊಂಡಿದೆ ಎಂದು ಆಯೋಗವು ವರದಿ ಮಾಡಿದೆ.
ವಿಶೇಷ ಸಮಗ್ರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲು, ECI ಸುಮಾರು 1 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು (BLOs), 4 ಲಕ್ಷ ಸ್ವಯಂಸೇವಕರು ಮತ್ತು 12 ಪ್ರಮುಖ ರಾಜಕೀಯ ಪಕ್ಷಗಳಿಂದ ನಾಮನಿರ್ದೇಶನಗೊಂಡ 1.5 ಲಕ್ಷ ಬೂತ್ ಮಟ್ಟದ ಏಜೆಂಟ್ (BLA) ಗಳನ್ನು ನಿಯೋಜಿಸಿದೆ. ಕ್ಷೇತ್ರ ಪರಿಶೀಲನೆಯ ಸಮಯದಲ್ಲಿ ಅರ್ಜಿ ಸಲ್ಲಿಸದ ಅಥವಾ ನಾಪತ್ತೆಯಾಗಿರುವ ಮತದಾರರನ್ನು ಸಂಪರ್ಕಿಸುವ ಕಾರ್ಯವನ್ನು ಈ ತಂಡಗಳು ವಹಿಸಿಕೊಂಡಿವೆ.
ಇಲ್ಲಿಯವರೆಗೆ ಅರ್ಜಿ ಸಲ್ಲಿಕೆ ಅಥವಾ ಸ್ಥಳದ ಪರಿಶೀಲನೆ ಮೂಲಕ 7.68 ಕೋಟಿ ಮತದಾರರು ಶೇ. 97. 30 ರಷ್ಟು ಮತದಾರರನ್ನು ಗುರುತಿಸಲಾಗಿದೆ. ಉಳಿದ ಸರಿಸುಮಾರು 21.35 ಲಕ್ಷ ಮತದಾರರನ್ನು ಇನ್ನೂ ಲೆಕ್ಕ ಹಾಕಬೇಕಾಗಿದೆ. ಅವರ ಇಎಫ್‌ಗಳನ್ನು ಇನ್ನೂ ಪರಿಶೀಲಿಸಬೇಕಾಗಿದೆ. ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು 52.30 ಲಕ್ಷ ರದ್ದುಪಡಿಸಿದ ಮತದಾರರ ಹೆಸರುಗಳ ವಿವರಗಳನ್ನು ರಾಜ್ಯದ ಎಲ್ಲಾ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಆಯೋಗ ಹಂಚಿಕೊಂಡಿದೆ.
Advertisement