
ನವದೆಹಲಿ: ನಗದು ಪತ್ತೆ ಪ್ರಕರಣದಲ್ಲಿ, ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಯಶವಂತ್ ವರ್ಮಾ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮನ್ನು ತಪ್ಪಿತಸ್ಥರೆಂದು ಘೋಷಿಸಿದ ಆಂತರಿಕ ತನಿಖಾ ವರದಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯನ್ನು ತುರ್ತಾಗಿ ಪಟ್ಟಿ ಮಾಡಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ವರ್ಮಾ ಪರವಾಗಿ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್, ಮುಖ್ಯ ನ್ಯಾಯಮೂರ್ತಿ (CJI) ಬಿ ಆರ್ ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠಕ್ಕೆ, ಈ ಪ್ರಕರಣದಲ್ಲಿ ಪ್ರಮುಖ ಸಾಂವಿಧಾನಿಕ ವಿಷಯಗಳು ಒಳಗೊಂಡಿವೆ ಎಂದು ಮನವಿ ಮಾಡಿದರು.
ಈ ಸಲ್ಲಿಕೆಯನ್ನು ಕೇಳಿದ ನಂತರ, ಸಿಜೆಐ ಕಪಿಲ್ ಸಿಬಲ್ ಅವರಿಗೆ ಈ ವಿಷಯವನ್ನು ಕೈಗೆತ್ತಿಕೊಳ್ಳಲು ಪೀಠವನ್ನು ರಚಿಸಲಾಗುವುದು ಎಂದು ಭರವಸೆ ನೀಡಿದರು. ಆದರೆ ದಿನಾಂಕವನ್ನು ನಿಗದಿಪಡಿಸಲಿಲ್ಲ.
ಪ್ರಕರಣದ ಸುತ್ತಲಿನ ಆಂತರಿಕ ಚರ್ಚೆಗಳಲ್ಲಿ, ವಿಚಾರಣಾ ಪೀಠದ ಭಾಗವಾಗಿರುವುದು ಸೂಕ್ತವಲ್ಲ ಎಂದು ಸಿಜೆಐ ಸ್ಪಷ್ಟಪಡಿಸಿದರು. ನಾನು ಆ ಸಂಭಾಷಣೆಯ ಭಾಗವಾಗಿದ್ದರಿಂದ ಆ ವಿಷಯವನ್ನು ಕೈಗೆತ್ತಿಕೊಳ್ಳುವುದು ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಸಿಜೆಐ ಸ್ಪಷ್ಟಪಡಿಸಿದರು.
ನ್ಯಾಯಮೂರ್ತಿ ವರ್ಮಾ ಅವರ ರಿಟ್ ಅರ್ಜಿಯಲ್ಲಿ, ವಶಪಡಿಸಿಕೊಂಡ ನಗದು ಯಾರಿಗೆ ಸೇರಿದೆ ಅಥವಾ ಅದನ್ನು ಆವರಣದಿಂದ ಹೇಗೆ ತೆಗೆದುಹಾಕಲಾಗಿದೆ ಎಂಬುದನ್ನು ಕಂಡುಹಿಡಿಯಲು ಆಂತರಿಕ ತನಿಖಾ ಸಮಿತಿ ವಿಫಲವಾಗಿದೆ ಎಂದು ಹೇಳಲಾಗಿದೆ.
ದೇಶದ ನ್ಯಾಯಾಂಗದ ಇತಿಹಾಸದಲ್ಲಿ ಮೊದಲ ಬಾರಿಗೆ, ಹಾಲಿ ಹೈಕೋರ್ಟ್ ನ್ಯಾಯಾಧೀಶರು ಆಂತರಿಕ ತನಿಖಾ ಸಮಿತಿಯ ವರದಿಯನ್ನು ಪ್ರಶ್ನಿಸಿ ರಿಟ್ ಅರ್ಜಿಯನ್ನು ಸಲ್ಲಿಸುವ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Advertisement