
ಮುಂಬೈ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ 'ಸರತಿ ಸಾಲಲ್ಲಿ ಬನ್ನಿ' ಎಂದಿದ್ದಕ್ಕೇ ಖಾಸಗಿ ಕ್ಲಿನಿಕ್ ನ ರಿಸೆಪ್ಶನಿಸ್ಟ್ ಯುವತಿ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಮಹಾರಾಷ್ಟ್ರದ ಥಾಣೆಯ ಕಲ್ಯಾಣ್ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಖಾಸಗಿ ಕ್ಲಿನಿಕ್ ಶ್ರೀ ಬಾಲ್ ಚಿಕಿತ್ಸಾಲಯದ ರಿಸೆಪ್ಶನಿಸ್ಟ್ 25 ವರ್ಷದ ಸೋನಾಲಿ ಕಲಾಸರೆ ಎಂಬುವವರ ಮೇಲೆ ರೋಗಿ ಕಡೆಯವರು ತೀವ್ರ ಹಲ್ಲೆ ನಡೆಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಈ ಕುರಿತು ಸಂತ್ರಸ್ಥೆ ಸೋನಾಲಿ ಕಲಾಸರೆ ಪೊಲೀಸ್ ದೂರು ದಾಖಲಿಸಿದ್ದು, ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ನಾವು ಅಶ್ಲೀಲ ಭಾಷೆ ಮತ್ತು ಮಹಿಳೆಯ ಮಾನನಷ್ಟ ಪ್ರಕರಣದಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತೆಯೇ ಹಲ್ಲೆ ನಡೆಸಿದಾತನನ್ನು ಗೋಪಾಲ್ ಝಾ ಎಂದು ಗುರುತಿಸಲಾಗಿದ್ದು, ಕುಡಿದ ಅಮಲಿನಲ್ಲಿ ಆತ ವೈದ್ಯರ ಕ್ಯಾಬಿನ್‌ಗೆ ಪ್ರವೇಶಿಸಲು ಪ್ರಯತ್ನಿಸಿ ಅದನ್ನು ತಡೆದ ರಿಸೆಪ್ಶನಿಸ್ಟ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.
ಆಗಿದ್ದೇನು?
ಮಹಾರಾಷ್ಟ್ರದ ಥಾಣೆಯ ಕಲ್ಯಾಣ್ ನಲ್ಲಿರುವ ಖಾಸಗಿ ಕ್ಲಿನಿಕ್ ಶ್ರೀ ಬಾಲ್ ಚಿಕಿತ್ಸಾಲಯದಲ್ಲಿ ವೈದ್ಯರ ಕಾಣಲು ಜನರು ತುಂಬಿದ್ದರು. ಈ ವೇಳೆ ಗೋಪಾಲ್ ಝಾ ತನ್ನ ಅನಾರೋಗ್ಯ ಪೀಡಿತ ಸಂಬಂಧಿಯೊಬ್ಬರನ್ನು ವೈದ್ಯರ ಬಳಿಗೆ ಕರೆತಂದಿದ್ದ. ತುಂಬಾ ಜನರಿದ್ದ ಕಾರಣ ಪ್ರತೀ ರೋಗಿಗಳ ವಿಚಾರಿಸುವುದು ನಿಧಾನವಾಗಿತ್ತು. ಈ ವೇಳೆ ಸಂಯಮ ಕಳೆದುಕೊಂಡ ಗೋಪಾಲ್ ಝಾ ಕ್ಲಿನಿಕ್ ರಿಸೆಪ್ಶನಿಸ್ಟ್ ಸೋನಾಲಿ ಬಳಿ ವಾಗ್ವಾದ ನಡೆಸಿದ್ದಾನೆ.
ಈ ವೇಳೆ ರಿಸೆಪ್ಶನಿಸ್ಟ್ ಸೋನಾಲಿ ಎಲ್ಲರಿಗೂ ಸರತಿ ಸಾಲಲ್ಲಿ ಬರುವಂತೆ ಸೂಚಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ಗೋಪಾಲ್ ಝಾ ಟೇಬಲ್ ಒದ್ದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಈ ವೇಳೆ ಆತನೊಂದಿಗೆ ಬಂದಿದ್ದ ಇಬ್ಬರು ಮಹಿಳೆಯರು ಆತನನ್ನು ಸಂತೈಸಿದ್ದಾರೆ.
ಇದೇ ಸಂದರ್ಭದಲ್ಲೇ ರಿಸೆಪ್ಶನಿಸ್ಟ್ ಸೋನಾಲಿ ಮಹಿಳೆಯೊಬ್ಬರಿಗೆ ಕಪಾಳ ಮೋಕ್ಷ ಮಾಡಿ ಸರತಿ ಸಾಲಲ್ಲಿ ಬರುವಂತೆ ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗೋಪಾಲ್ ಝಾ ನೋಡ ನೋಡುತ್ತಲೇ ಕ್ಲಿನಿಕ್ ಒಳಗೆ ನುಗ್ಗಿ ಸೋನಾಲಿ ಮೇಲೆ ಕಾಲಿಂದ ಒದ್ದು ಆಕೆಯ ಜುಟ್ಟು ಹಿಡಿದು ಥಳಿಸಿದ್ದಾನೆ. ಈ ವೇಳೆ ಇಲ್ಲಿದ್ದ ಇತರರು ಆತನನ್ನು ಹಿಡಿದು ಎಳೆದುಕೊಂಡಿದ್ದಾರೆ.
ಇವಿಷ್ಟೂ ಘಟನೆ ಕ್ಲಿನಿಕ್ ಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ರಿಸೆಪ್ಶನಿಸ್ಟ್ ಸೊನಾಲಿ ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕಲ್ಯಾಣ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಹಾಯಕ ಪೊಲೀಸ್ ಆಯುಕ್ತ ಸುಹಾಸ್ ಹೆಮಾಡೆ ಈ ಕುರಿತು ಮಾತನಾಡಿ, "ನಾವು ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದೇವೆ. ನಾವು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಮತ್ತು ಆತನ ಬಂಧನದ ನಂತರ ವಿವರಗಳು ಹೊರಬರುತ್ತವೆ" ಎಂದು ಹೇಳಿದ್ದಾರೆ.
Advertisement