
ಗಾಜಿಯಾಬಾದ್: ಇಲ್ಲಿನ ಆಭರಣ ಅಂಗಡಿಯೊಂದರಲ್ಲಿ ಹಗಲು ದರೋಡೆ ನಡೆದಿದ್ದು, ಡೆಲಿವರಿ ಏಜೆಂಟ್‌ಗಳಂತೆ ಉಡುಪು ಧರಿಸಿದ ಇಬ್ಬರು ವ್ಯಕ್ತಿಗಳು ಅಂಗಡಿಯಲ್ಲಿದ್ದ ಸಿಬ್ಬಂದಿಗೆ ಬಂದೂಕು ತೋರಿಸಿ ಬೆದರಿಸಿ 20 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಬೆಳ್ಳಿ ಮತ್ತು ಚಿನ್ನವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಅಂಗಡಿಯ ಸಿಸಿಟಿವಿ ದೃಶ್ಯಾವಳಿಯಲ್ಲಿ, ಅಪರಿಚಿತ ಇಬ್ಬರು ವ್ಯಕ್ತಿಗಳು ಅಂಗಡಿಯೊಳಗೆ ನುಗ್ಗಿ, ಲೂಟಿ ಮಾಡಿದ ನಂತರ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗುತ್ತಿರುವುದು ಸೆರೆಯಾಗಿದೆ.
ಗುರುವಾರ ಲಿಂಕ್ ರಸ್ತೆ ಪ್ರದೇಶದ ಮಾನ್ಸಿ ಜ್ಯುವೆಲ್ಲರ್ಸ್‌ನಲ್ಲಿ ಈ ದರೋಡೆ ನಡೆದಿದೆ. ಇಬ್ಬರು ದರೋಡೆಕೋರರು ಅಂಗಡಿಯಿಂದ 20 ಕಿಲೋಗ್ರಾಂಗಳಿಗೂ ಹೆಚ್ಚು ಬೆಳ್ಳಿ ಮತ್ತು 125 ಗ್ರಾಂ ಚಿನ್ನ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲವಾದರೂ, ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ಕಣ್ಗಾವಲು ಬಳಸಿಕೊಂಡು ಶಂಕಿತರನ್ನು ಗುರುತಿಸಲು ಮತ್ತು ಬಂಧಿಸಲು ಗಾಜಿಯಾಬಾದ್ ಪೊಲೀಸರು ಬಹು ತಂಡಗಳನ್ನು ರಚಿಸಿದ್ದಾರೆ.
'ದುಷ್ಕರ್ಮಿಗಳು ಅಂಗಡಿಯಿಂದ 20 ಲಕ್ಷ ರೂ.ಗಳಿಗೂ ಹೆಚ್ಚು ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ಅನುಮಾನ ಬರದಂತೆ ಅವರು ಬ್ಲಿಂಕಿಟ್ ಮತ್ತು ಸ್ವಿಗ್ಗಿಯ ಸಮವಸ್ತ್ರವನ್ನು ಧರಿಸಿದ್ದರು' ಎಂದು ಉಪ ಪೊಲೀಸ್ ಆಯುಕ್ತ (ಟ್ರಾನ್ಸ್ ಹಿಂಡನ್) ನಿಮಿಷ್ ಪಾಟೀಲ್ ಹೇಳಿದ್ದಾರೆ.
'ಪ್ರಕರಣದ ತನಿಖೆಗಾಗಿ ನಾವು ಆರು ತಂಡಗಳನ್ನು ರಚಿಸಿದ್ದೇವೆ ಮತ್ತು ಶೀಘ್ರದಲ್ಲೇ ದರೋಡೆಕೋರರನ್ನು ಬಂಧಿಸಲಾಗುವುದು' ಎಂದು ಅಧಿಕಾರಿ ಹೇಳಿದರು.
ಒಬ್ಬ ದರೋಡೆಕೋರ ಹಳದಿ ಬ್ಲಿಂಕಿಟ್ ಟಿ-ಶರ್ಟ್, ಹೆಲ್ಮೆಟ್ ಮತ್ತು ಫೇಸ್ ಮಾಸ್ಕ್ ಧರಿಸಿರುವುದು ಕಂಡುಬರುತ್ತದೆ. ಮತ್ತೊಬ್ಬ ಕಿತ್ತಳೆ ಬಣ್ಣದ ಸ್ವಿಗ್ಗಿ ಸಮವಸ್ತ್ರದಲ್ಲಿ ಹೆಲ್ಮೆಟ್ ಧರಿಸಿದ್ದಾನೆ.
Advertisement