
ಮಣಿಪುರ: ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಇನ್ನೂ ಆರು ತಿಂಗಳ ಕಾಲ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ನಿರ್ಣಯ ಮಂಡಿಸಲಿದ್ದಾರೆ.
ರಾಜ್ಯಸಭೆಯು ಮಣಿಪುರ ವಿಚಾರಕ್ಕೆ ಸಂಬಂಧಿಸಿದಂತೆ ಸಂವಿಧಾನದ 356 ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ಹೊರಡಿಸಿದ ಆದೇಶವನ್ನು ಮುಂದುವರೆಸಲು ಆಗಸ್ಟ್ 13, 2025 ರಿಂದ ಜಾರಿಗೆ ಬರುವಂತೆ ಆರು ತಿಂಗಳ ಅವಧಿಗೆ ನಿರ್ಣಯ ಅಂಗೀಕರಿಸಲಿದೆ ಎಂದು ಆಧಿಕಾರಿಗಳು ತಿಳಿಸಿದ್ದಾರೆ. ನಿರ್ಣಯವು ಆಗಸ್ಟ್ 13ರಿಂದ ಜಾರಿಗೆ ಬರಲಿದೆ.
ಫೆಬ್ರವರಿ 9 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಎನ್. ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಿದ ಬಳಿಕ ಮುಂದಿನ ಮುಖ್ಯಮಂತ್ರಿ ಕುರಿತು ಬಿಜೆಪಿಯಲ್ಲಿ ಒಮ್ಮತ ಮೂಡದ ಕಾರಣ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲಾಯಿತು.
ಮೇ 2023 ರಲ್ಲಿ ಪ್ರಾರಂಭವಾದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 260 ಜನರು ಸಾವನ್ನಪ್ಪಿದ್ದು, ಶೇಕಡಾ 80 ರಷ್ಟು ಜನ ಹಿಂಸಾಚಾರ ಆರಂಭವಾದ ಒಂದೇ ತಿಂಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಹಿಂಸಾಚಾರ ಹಿನ್ನೆಲೆಯಲ್ಲಿ ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ಏಪ್ರಿಲ್ ತಿಂಗಳಿನಲ್ಲಿ ಮಣಿಪುರ ರಾಜ್ಯದ ಬಿಜೆಪಿ ಶಾಸಕರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ಸರ್ಕಾರ ಆಡಳಿತ ನಡೆಸುವಂತೆ ಮಾಡಬೇಕೆಂದು ಒತ್ತಾಯಿಸಿದ್ದರು.
ಕೆಲ ಶಾಸಕರು ರಾಷ್ಟ್ರಪತಿ ಆಡಳಿತವನ್ನು ಸ್ವಾಗತಿಸಿದ್ದರೆ, ಇನ್ನೂ ಕೆಲ ಶಾಸಕರು, ಶಾಂತಿ ಸ್ಥಾಪಿಸುವಲ್ಲಿ ಯಾವುದೇ ಪ್ರಮುಖ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.
ಹಿಂಸಾಚಾರ ಮತ್ತೆ ಎದುರಾಗಬಹುದು ಎಂಬ ಆತಂಕ ಸ್ಥಳೀಯ ಜನರಲ್ಲಿದೆ. ರಾಷ್ಟ್ರಪತಿ ಆಡಳಿತ ಹೇರಿಕೆಗೆ ಹಲವಾರು ನಾಗರಿಕ ಸಮಾಜ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಹೀಗಾಗಿಸ ಸರ್ಕಾರ ಆಡಳಿತ ನಡೆಸುವಂತೆ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
Advertisement