
ನವದೆಹಲಿ: ರಾಜಸ್ಥಾನದ ಝಲಾವರ್ ಜಿಲ್ಲೆಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದು 7 ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣ ಸಂಬಂಧ ರಾಜಸ್ಥಾನ ಸರ್ಕಾರ ಮತ್ತು ಝಲಾವರ್ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿ ಮಾಡಿರುವುದಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ) ಶನಿವಾರ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ವಿವರವಾದ ವರದಿ ಸಲ್ಲಿಸುವಂತೆ ಎನ್‌ಎಚ್‌ಆರ್‌ಸಿ ಸೂಚಿಸಿದೆ.
ಶುಕ್ರವಾರ ಝಲಾವರ್ ಜಿಲ್ಲೆಯ ಪಿಪ್ಲೋಡಿ ಸರ್ಕಾರಿ ಶಾಲಾ ಕಟ್ಟಡದ ಒಂದು ಭಾಗ ಕುಸಿದು ಏಳು ಮಕ್ಕಳು ಸಾವನ್ನಪ್ಪಿದ್ದರು ಮತ್ತು 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದರು.
ಜುಲೈ 25 ರಂದು ರಾಜಸ್ಥಾನದ ಝಲಾವರ್ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಕಟ್ಟಡ ಕುಸಿದು ಏಳು ಮಕ್ಕಳು ಸಾವನ್ನಪ್ಪಿ 28 ಮಕ್ಕಳು ಗಾಯಗೊಂಡಿದ್ದಾರೆ ಎಂಬ ಮಾಧ್ಯಮ ವರದಿಯ ಆಧಾರದ ಮೇಲೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಎನ್‌ಎಚ್‌ಆರ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.
'ಶಾಲಾ ಕಟ್ಟಡದ ಶಿಥಿಲ ಸ್ಥಿತಿ' ಬಗ್ಗೆ ಸ್ಥಳೀಯರು ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ' ಎಂದು ಎನ್‌ಎಚ್‌ಆರ್‌ಸಿ ಹೇಳಿದೆ.
ಮಾಧ್ಯಮ ವರದಿಯ ವಿಷಯ ನಿಜವಾಗಿದ್ದರೆ, ಅದು ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ವಿಷಯವಾಗುತ್ತದೆ ಎಂದು ಆಯೋಗ ಎಚ್ಚರಿಸಿದೆ.
Advertisement