
ನೀಲಂಕಾರೈ: ಅಂತಿಮ ಯಾತ್ರೆಯೊಂದರ ವೇಳೆ ಪಟಾಕಿ ಸಿಡಿದು 10 ವರ್ಷದ ಬಾಲಕಿಯ ಮುಖಕ್ಕೆ ತೀವ್ರ ಗಾಯಗಳಾಗಿರುವ ಘಟನೆ ತಮಿಳುನಾಡಿನ ನೀಲಂಕಾರೈನಲ್ಲಿ ನಡೆದಿದೆ. ವೆಟ್ಟುವಂಕನ್ನಿಯ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ನಿಶಾಂತಿನಿ ಗಾಯಗೊಂಡ ಬಾಲಕಿ. ಈಕೆ ಮನೆಗೆ ಹಿಂದಿರುಗುತ್ತಿದ್ದಾಗ ಈ ಅವಘಡ ನಡೆದಿದೆ.
ಪಾರ್ಥೀವ ಶರೀರವೊಂದರ ಅಂತಿಮ ಯಾತ್ರೆ ವೇಳೆಯಲ್ಲಿ ಪಾಲ್ಗೊಂಡ ಕೆಲವರು ರಸ್ತೆಯ ಮೇಲೆ ಹೆಚ್ಚಿನ ಡೆಸಿಬಲ್ ಪಟಾಕಿಗಳನ್ನು ಸಿಡಿಸುತ್ತಿದ್ದಾಗ ಪಟಾಕಿಯೊಂದು ನಿಶಾಂತಿನಿಯ ಮುಖದ ಮೇಲೆ ಬಿದ್ದು ಸ್ಫೋಟಗೊಂಡಿದೆ.
ಪರಿಣಾಮ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಅಲ್ಲಿದ್ದವರು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ಸ್ಫೋಟದಿಂದ ಆಕೆಯ ಮುಖದ ಎಡಭಾಗಕ್ಕೆ ತೀವ್ರ ಹಾನಿಯಾಗಿದೆ. ಆಕೆಯ ಕೆನ್ನೆ, ಮೂಗು ಮತ್ತು ಕಣ್ಣಿಗೂ ಗಾಯವಾಗಿದೆ. ಆಕೆಯ ತಂದೆ ನೀಡಿದ ದೂರಿನ ಮೇರೆಗೆ ನೀಲಂಕರೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು 33 ವರ್ಷದ ಗೋಪಿನಾಥ್ ಎಂಬಾತನನ್ನು ಬಂಧಿಸಿದ್ದಾರೆ.
ಗೋಪಿನಾಥ್ ಜೊತೆಗೆ ಪಟಾಕಿ ಸಿಡಿಸುವಾಗ ಮದ್ಯದ ಅಮಲಿನಲ್ಲಿದ್ದ ಮತ್ತೋರ್ವ ಯುವಕ ವಿನೀತ್‌ಗಾಗಿಯೂ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಮುಂದಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement