
ಚಂಡೀಗಡ: ಸಿವಿಲ್ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ಆಸ್ಪತ್ರೆ ಐಸಿಯುನಲ್ಲಿನ ತಾಂತ್ರಿಕ ದೋಷದಿಂದಾಗಿ ಆಮ್ಲಜನಕ ಪೂರೈಕೆಯಲ್ಲಿ ಹಠಾತ್ ಅಡಚಣೆ ಉಂಟಾದ ಕಾರಣ ಮೂವರು ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯು ಪಂಜಾಬ್ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಮೃತರ ಕುಟುಂಬಗಳು ಆಸ್ಪತ್ರೆಯ ಕೇಂದ್ರ ವ್ಯವಸ್ಥೆಯಲ್ಲಿನ ದೋಷದಿಂದಾಗಿ ಆಮ್ಲಜನಕ ಪೂರೈಕೆ ಸ್ಥಗಿತಗೊಂಡ ಕಾರಣ ತಮ್ಮ ಪ್ರೀತಿಪಾತ್ರರು ಪ್ರಾಣ ಕಳೆದುಕೊಂಡರು ಎಂದು ಆರೋಪಿಸಿದ್ದಾರೆ.
ಆದರೆ ಆಸ್ಪತ್ರೆ ಅಧಿಕಾರಿಗಳು ಆರೋಪಗಳನ್ನು ನಿರಾಕರಿಸಿದ್ದಾರೆ, ಆಮ್ಲಜನಕದ ಒತ್ತಡದಲ್ಲಿ ತಾತ್ಕಾಲಿಕ ಕುಸಿತ ಮಾತ್ರ ಕಂಡುಬಂದಿದೆ ಮತ್ತು ಬ್ಯಾಕಪ್ ಸಿಲಿಂಡರ್‌ಗಳನ್ನು "ಕ್ಷಿಪ್ರಗತಿಯಲ್ಲಿ" ಅಳವಡಿಸಲಾಯಿತು ಎಂದು ಸಮರ್ಥಿಸಿಕೊಂಡರು.
ವೈದ್ಯಕೀಯ ಅಧೀಕ್ಷಕ ಡಾ. ರಾಜ್ ಕುಮಾರ್ ಬದ್ದನ್ ಮಾತನಾಡಿ ಘಟನೆಯ ತನಿಖೆಗಾಗಿ ಒಂಬತ್ತು ಸದಸ್ಯರ ಸಮಿತಿಯನ್ನು ರಚಿಸಿರುವುದಾಗಿ ದೃಢಪಡಿಸಿದರು. ಆಮ್ಲಜನಕ ಸ್ಥಾವರದಲ್ಲಿ ತೈಲ ಸೋರಿಕೆಯಾಗಿದ್ದು ಅದು ತಾಂತ್ರಿಕ ದೋಷಕ್ಕೆ ಕಾರಣವಾಯಿತು. ಸ್ವಲ್ಪ ಸಮಯದವರೆಗೆ ಪೂರೈಕೆಯಲ್ಲಿ ಅಡ್ಡಿಯಾಯಿತು. ಸಮಸ್ಯೆ ಸರಿಪಡಿಸಲಾಯಿತು, ಆದರೆ ದುರದೃಷ್ಟವಶಾತ್, ರೋಗಿಗಳನ್ನು ಉಳಿಸಲು ಸಾಧ್ಯವಾಗಲಿಲ್ಲಎಂದು ಅವರು ಹೇಳಿದರು. ಪ್ರತಿಯೊಬ್ಬ ರೋಗಿಯ ವೈದ್ಯಕೀಯ ದಾಖಲೆಯಲ್ಲಿ ಸಾವಿಗೆ ಕಾರಣಗಳನ್ನು ದಾಖಲಿಸಲಾಗಿದೆ" ಎಂದು ಕುಟುಂಬಗಳ ಆರೋಪಗಳನ್ನು ತಳ್ಳಿಹಾಕಿದರು.
ಮೃತರಲ್ಲಿ ಹಾವು ಕಡಿತಕ್ಕೊಳಗಾದ ವ್ಯಕ್ತಿ, ಔಷಧದ ಮಿತಿಮೀರಿದ ಸೇವನೆಗೆ ದಾಖಲಾಗಿದ್ದ ಯುವಕ ಮತ್ತು ಕ್ಷಯರೋಗಿ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಸಮಯದಲ್ಲಿ ಅವರೆಲ್ಲರೂ ವೆಂಟಿಲೇಟರ್ ಬೆಂಬಲದಲ್ಲಿದ್ದರು.
ಪಂಜಾಬ್ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಅವರು ಈ ವಿಷಯದ ಬಗ್ಗೆ ತನಿಖೆ ನಡೆಸಲು ಚಂಡೀಗಢದ ತಂಡ ಆಸ್ಪತ್ರೆಗೆ ಭೇಟಿ ನೀಡಲಿದೆ ಎಂದು ಹೇಳಿದರು. "ಆಮ್ಲಜನಕ ಪೂರೈಕೆಯಲ್ಲಿನ ಬದಲಾವಣೆಯ ಸಮಯದಲ್ಲಿ ಈ ದೋಷ ಸಂಭವಿಸಿದೆ. ಸಮಿತಿಯ ಸಂಶೋಧನೆಗಳಿಗಾಗಿ ನಾವು ಕಾಯುತ್ತೇವೆ" ಎಂದು ಅವರು ಹೇಳಿದರು.
Advertisement