
ಪಾಟ್ನಾ: ಪಾಟ್ನಾದ ಪರಾಸ್ ಆಸ್ಪತ್ರೆಯ ಐಸಿಯುವಿಗೆ ನುಗ್ಗಿ, ವ್ಯಕ್ತಿಯ ಮೇಲೆ ಗುಂಡಿನ ದಾಳಿಸಿದ್ದ ಆರೋಪಿಗಳ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.
ಇಂದು ಬೆಳಿಗ್ಗೆ ಭೋಜ್‌ಪುರ ಜಿಲ್ಲೆಯಲ್ಲಿ ಎನ್‌ಕೌಂಟರ್ ನಡೆದಿದ್ದು, ಮೂವರ ಪೈಕಿ ಇಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕಟಿಯಾ ರಸ್ತೆಯಲ್ಲಿ ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಎನ್‌ಕೌಂಟರ್ ನಡೆದಿದೆ, ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡ ಮೂವರು ಆರೋಪಿಗಳನ್ನು ಗುರ್ತಿಸಿ, ಶರಣಾಗುವಂತೆ ಸೂಚಿಸಿತ್ತು.
ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಪ್ರತಿ ದಾಳಇ ನಡೆಸಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಇಬ್ಬರನ್ನೂ ವಶಕ್ಕೆ ಪಡೆದು, ವೈದ್ಯಕೀಯ ಚಿಕಿತ್ಸೆ ಕೊಡಿಸಿದ್ದಾರೆ. ಮೂರನೇ ಆರೋಪಿ ಅಭಿಷೇಖ್ ಕುಮಾರ್ ನನ್ನು ಸ್ಥಳದಲ್ಲಿಯೇ ಬಂಧನಕ್ಕೊಳಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನಾ ಸ್ಥಳದಿಂದ ಎರಡು ಪಿಸ್ತೂಲ್‌ಗಳು, ಒಂದು ದೇಶೀಯ ಬಂದೂಕು, ಎರಡು ಮ್ಯಾಗಜೀನ್‌ಗಳು ಮತ್ತು ನಾಲ್ಕು ಜೀವಂತ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ಜುಲೈ 17 ರಂದು ಪಾಟ್ನಾದ ಪರಾಸ್ ಆಸ್ಪತ್ರೆಯಲ್ಲಿ ಚಂದನ್ ಮಿಶ್ರಾ ಅವರ ಕೊಲೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಗ್ಯಾಂಗ್‌ಸ್ಟಾರ್ ಚಂದನ್ ಮಿಶ್ರಾನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಪೆರೋಲ್ ಮೇಲೆ ಪಾಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನರಿತ ಎದುರಾಳಿ ಗ್ಯಾಂಗ್‌ನವರು ಗನ್ ಸಮೇತ ಆಸ್ಪತ್ರೆಗೆ ನುಗ್ಗಿ ಮನಸೋ ಇಚ್ಛೆ ಗುಂಡಿನ ಸುರಿಮಳೆಗೈದು, ಸ್ಥಳದಿಂದ ಕಾಲ್ಕಿತ್ತಿದ್ದರು.
Advertisement