
ಪಾಟ್ನಾ: ಬಿಹಾರದ ಪಾಟ್ನಾ ಜಿಲ್ಲೆಯ ಮಸೌರ್ಹಿ-ನೌಬತ್‌ಪುರ ರಸ್ತೆಯ ಧನಿಚಕ್ ಮೋರ್ ಬಳಿ ಭಾನುವಾರ ರಾತ್ರಿ ವೇಗವಾಗಿ ಬಂದ ಟ್ರಕ್ ಆಟೋರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಏಳು ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಮೃತರನ್ನು ಮಾತೇಂದ್ರ ಬಿಂದ್(25), ವಿನಯ್ ಬಿಂದ್ (30), ಉಮೇಶ್ ಬಿಂದ್(38), ರಮೇಶ್ ಬಿಂದ್ (52), ಉಮೇಶ್ ಬಿಂದ್ (30), ಸೂರಜ್ ಠಾಕೂರ್ (20) ಮತ್ತು ಆಟೋ ಚಾಲಕ ಸುಶೀಲ್ ಕುಮಾರ್ (35) ಎಂದು ಗುರುತಿಸಲಾಗಿದೆ.
ಮೃತರಲ್ಲಿ ಆರು ಜನ ದೋರಿಪರ್ ಮೂಲದವರಾಗಿದ್ದು, ಆಟೋ ಚಾಲಕ ಸುಶೀಲ್ ಕುಮಾರ್ ಹನ್ಸಾದಿಹ್ ಗ್ರಾಮದವರಾಗಿದ್ದಾರೆ.
ಪೊಲೀಸರ ಪ್ರಕಾರ, ಆರು ಕಾರ್ಮಿಕರು ಕೆಲಸ ಮುಗಿಸಿ ಆಟೋದಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಭೀಕರ ಅಪಘಾತ ಸಂಭವಿಸಿದೆ. ಡಿಕ್ಕಿಯ ಪರಿಣಾಮ, ಎರಡೂ ವಾಹನಗಳು ರಸ್ತೆಬದಿಯ ನೀರು ತುಂಬಿದ ಕಂದಕಕ್ಕೆ ಬಿದ್ದಿದ್ದು, ನಂತರ ಜೆಸಿಬಿ ಯಂತ್ರವನ್ನು ಬಳಸಿ ಮೃತರ ಶವಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ.
ಟ್ರಕ್ ನ ಆಕ್ಸಲ್ ಮುರಿದು ಚಾಲಕನ ನಿಯಂತ್ರಣ ತಪ್ಪಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದೆ ಎಂದು ತೋರುತ್ತಿದೆ ಎಂದು ಮರ್ಹೌರ್ಹಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ವಿಜಯ್ ಯದ್ವೇಂದು ಅವರು ತಿಳಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
Advertisement