
ನವದೆಹಲಿ: ಚುನಾವಣಾ ಆಯೋಗ ಸಂವಿಧಾನಿಕ ಸಂಸ್ಥೆಯಾಗಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ. ಆದರೆ ಬಿಹಾರದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸಾಮೂಹಿಕವಾಗಿ ಮತದಾರರನ್ನು ಹೊರಗಿಟ್ಟರೆ ನ್ಯಾಯಾಲಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ.
ಬಿಹಾರದಲ್ಲಿ ಚುನಾವಣಾ ಆಯೋಗದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ಸಮಯ ನಿಗದಿಪಡಿಸಿರುವ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ, ಆಗಸ್ಟ್ 12 ಮತ್ತು 13 ರಂದು ರಂದು ವಿಚಾರಣೆಗೆ ಪಟ್ಟಿ ಮಾಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಮತ್ತು ವಕೀಲ ಪ್ರಶಾಂತ್ ಭೂಷಣ್, ಚುನಾವಣಾ ಆಯೋಗ, ಆಗಸ್ಟ್ 1 ರಂದು ಪ್ರಕಟಿಸಲಿರುವ ಕರಡು ಪಟ್ಟಿಯಿಂದ ಸಾಕಷ್ಟು ಜನರನ್ನು ಹೊರಗಿಡಲಾಗಿದೆ. ಅವರು ತಮ್ಮ ನಿರ್ಣಾಯಕ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದು ಮತ್ತೊಮ್ಮೆ ಆರೋಪಿಸಿದರು.
65 ಲಕ್ಷ ಮತದಾರರು ಹೆಸರುಗಳನ್ನು ಪರಿಷ್ಕರಣೆ ನಮೂನೆಗೆ ಸಲ್ಲಿಸಿಲ್ಲ ಎಂಬ ಚುನಾವಣಾ ಆಯೋಗದ ಹೇಳಿಕೆ ಅನುಮಾನಕ್ಕೆ ಕಾರಣವಾಗಿದೆ. ಈ ಪೈಕಿ ಅನೇಕರು ಮೃತಪಟ್ಟಿದ್ದಾರೆ ಅಥವಾ ಬೇರೆ ರಾಜ್ಯಗಳಿಗೆ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಈ ವ್ಯಕ್ತಿಗಳು ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ನ್ಯಾಯಮೂರ್ತಿ ಸೂರ್ಯ ಕಾಂತ್, "ಭಾರತೀಯ ಚುನಾವಣಾ ಆಯೋಗವು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಬೇಕಾಗುತ್ತದೆ ಎಂಬುದನ್ನು ಪರಿಗಣಿಸುತ್ತೇವೆ. ಇದರಲ್ಲಿ ಯಾವುದೇ ತಪ್ಪು ಮಾಡಿದ್ದರೆ, ನೀವು ನ್ಯಾಯಾಲಯದ ಗಮನಕ್ಕೆ ತನ್ನಿ. ನಾವು ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು. ನ್ಯಾಯಮೂರ್ತಿ ಬಾಗ್ಚಿ, 65 ಲಕ್ಷ ಮತದಾರರನ್ನು ಸಾಮೂಹಿಕವಾಗಿ ಹೊರಗಿಡುವಿಕೆ ಸಂಭವಿಸಿದರೆ, ನ್ಯಾಯಾಲಯ ಮಧ್ಯ ಪ್ರವೇಶಿಸುತ್ತದೆ. 15 ಜನರನ್ನು ಕರೆತನ್ನಿ, ಅವರ ಸ್ಥಿತಿಗತಿ ಏನೆಂದು ವಿಚಾರಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್ ಜೆಡಿ ಸಂಸದ ಮನೋಜ್ ಝಾ ಪರವಾಗಿ ವಾದ ಮಂಡಿಸಿದ ವಕೀಲ ಕಪಿಲ್ ಸಿಬಲ್, ಆ 65 ಲಕ್ಷ ಜನರು ಯಾರೆಂಬ ಮಾಹಿತಿ ಚುನಾವಣಾ ಆಯೋಗದ ಬಳಿ ಇದೆ. ಅವರು ಕರಡು ಪಟ್ಟಿಯಲ್ಲಿ ಹೆಸರುಗಳನ್ನು ಸೇರಿಸಿದರೆ ನಮಗೆ ಯಾವುದೇ ತಕರಾರು ಇಲ್ಲ ಎಂದರು. ಒಂದು ವೇಳೆ ಅನುಮಾನಕ್ಕೀಡಾದರೆ ನಮ್ಮ ಗಮನಕ್ಕೆ ತನ್ನಿ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.
ಆ.8ರೊಳಗೆ ಲಿಖಿತ ಹೇಳಿಕೆ ದಾಖಲಿಸಲು ಸೂಚನೆ: ಇದಕ್ಕೆ ಪ್ರತಿಯಾಗಿ ಚುನಾವಣಾ ಆಯೋಗದ ಪರವಾಗಿ ವಾದಿಸಿದ ವಕೀಲ ರಾಕೇಶ್ ದ್ವಿವೇದಿ, ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನಿಯಮಿತ ಪ್ರಕ್ರಿಯೆ ಇದೆ. ಈ ಹಂತದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು ಎಂದರು.
ಆಗಸ್ಟ್ 8 ರೊಳಗೆ ಲಿಖಿತ ಹೇಳಿಕೆ ಸಲ್ಲಿಸುವಂತೆ ನ್ಯಾಯಪೀಠ ಅರ್ಜಿದಾರರು ಹಾಗೂ ಚುನಾವಣಾ ಆಯೋಗಕ್ಕೆ ಸೂಚಿಸಿತು. ಲಿಖಿತ ಹೇಳಿಕೆ ದಾಖಲಿಸಲು ಅರ್ಜಿದಾರರು ಮತ್ತು ಚುನಾವಣಾ ಆಯೋಗದ ಕಡೆಯಿಂದ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ.
Advertisement