
ನವದೆಹಲಿ: IndiGo ವಿಮಾನದಲ್ಲಿ ಮತ್ತೆ ಪ್ರಕ್ಷುಬ್ದತೆ ಉಂಟಾಗಿದ್ದು, ಲ್ಯಾಂಡಿಂಗ್ ವಿಳಂಬವಾಗಿ ವಿಮಾನದಲ್ಲಿದ್ದ ಪ್ರಯಾಣಿಕರು ಚೀರಾಟ ನಡೆಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ರಾಯ್‌ಪುರದಿಂದ ದೆಹಲಿಗೆ ಹೋಗುತ್ತಿದ್ದ ಇಂಡಿಗೋ ವಿಮಾನವು ಧೂಳಿನ ಬಿರುಗಾಳಿಯಿಂದಾಗಿ ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿದ್ದು, ವಿಮಾನ ಲ್ಯಾಂಡ್ ಆಗುವ ಕೊಂಚ ಸಮಯದ ಮೊದಲು ಪೈಲಟ್ ಲ್ಯಾಂಡಿಂಗ್ ಅನ್ನು ಸ್ಥಗಿತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ದೆಹಲಿ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದ 6E 6313 ವಿಮಾನವು ಗಂಟೆಗೆ 80 ಕಿ.ಮೀ ವೇಗದಲ್ಲಿ ಬೀಸುತ್ತಿದ್ದ ಬಲವಾದ ಗಾಳಿಗೆ ಸಿಲುಕಿಕೊಂಡು ಪ್ರಕ್ಷಬ್ಧತೆ ಎದುರಿಸಿತು.
ಗಾಳಿಯಲ್ಲಿ ಹಲವು ಸುತ್ತುಗಳನ್ನು ಸುತ್ತಿದ ನಂತರ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಆ ಸಮಯದಲ್ಲಿ ಗಾಳಿಯ ವೇಗ ಗಂಟೆಗೆ 80 ಕಿ.ಮೀ.ವರೆಗೆ ಇತ್ತು ಎಂದು ಪೈಲಟ್ ಹೇಳಿದ್ದಾರೆ.
ಗಾಳಿಯ ಪ್ರಕ್ಷುಬ್ಧತೆ ಹಿನ್ನಲೆಯಲ್ಲಿ ಪೈಲಟ್ ವಿಮಾನದ ಲ್ಯಾಡಿಂಗ್ ಅನ್ನು ಮುಂದೂಡಿದರು. ಗಾಳಿಯ ವೇಗ ಕಡಿಮೆಯಾಗುವವರೆಗೂ ವಿಮಾನವನ್ನು ಆಗಸದಲ್ಲೇ ಗಿರಕಿ ಹೊಡೆಸಿದರು. ಬಳಿಕ ಗಾಳಿಯ ವೇಗ ಕಡಿಮೆಯಾಗುತ್ತಲೇ ವಿಮಾನ ಲ್ಯಾಂಡ್ ಮಾಡಿದ್ದಾರೆ ಎನ್ನಲಾಗಿದೆ.
ಲ್ಯಾಂಡಿಂಗ್ ವೇಳೆ ಟರ್ಬುಲೆನ್ಸ್ ಸಮಸ್ಯೆ
ಇಂಡಿಗೋ ವಿಮಾನ 6E 6313 ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಅನ್ನುಷ್ಟರಲ್ಲೇ ಟರ್ಬುಲೆನ್ಸ್‌ಗೆ ಸಿಲುಕಿದೆ. ಭಾರಿ ಪ್ರಮಾಣದ ಗಾಳಿ ಮಳೆಯಿಂದ ವಿಮಾನ ಲ್ಯಾಡಿಂಗ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಈ ವೇಳೆ ವಿಮಾನ ನಿಯಂತ್ರಕ್ಕೆ ಸಿಗದೆ ಆಗಸದಲ್ಲೇ ತೇಲಾಡಿದೆ.
ಆಗಸದಿಂದ ಇಳಿಯುತ್ತಿದ್ದಂತೆ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಹವಾಮಾನ ವೈಪರಿತ್ಯದಿಂದ ವಿಮಾನ ಸಂಪೂರ್ಣ ನಿಯಂತ್ರಣ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಹೀಗಾಗಿ ಇಂಡಿಗೋ ಪೈಲೆಟ್ ಸಮಯೋಚಿತ ನಿರ್ಧಾರ ಹಾಗೂ ವಿಮಾನ ನಿಯಂತ್ರಣಕ್ಕೆ ತೆಗೆದುಕೊಂಡು ವಿಮಾನ ಲ್ಯಾಂಡ್ ಮಾಡದೇ ಮತ್ತೆ ಹಾರಿಸಿದ್ದಾರೆ. ವಿಮಾನ ಲ್ಯಾಂಡಿಂಗ್ ಮಾಡದ ಪೈಲೆಟ್ ಮತ್ತೆ ದೆಹಲಿ ವಿಮಾನ ನಿಲ್ದಾಣದ ಸುತ್ತು ಹೊಡೆದಿದ್ದಾರೆ. ಭಾರಿ ಪ್ರಮಾಣದ ಗಾಳಿ ಕಡಿಮೆಯಾಗುವ ವರೆಗೆ ಒಂದೆರೆಡು ಸುತ್ತು ನಿಲ್ದಾಣದ ಸುತ್ತ ಹೊಡೆದಿದ್ದಾರೆ.
ಪ್ರಯಾಣಿಕರ ಚೀರಾಟ
ಅತ್ತ ವಿಮಾನದ ಪೈಲಟ್ ವಿಮಾನವನ್ನು ಲ್ಯಾಂಡ್ ಮಾಡಲಾಗದೇ ಹರಸಾಹಸ ಪಡುತ್ತಿದ್ದರೆ ಇತ್ತ ವಿಮಾನದಲ್ಲಿದ್ದ ಪ್ರಯಾಣಿಕರು ಜೀವ ಭಯದಿಂದ ಚೀರಾಟ ನಡೆಸಿದರು. ಪ್ರಯಾಣಿಕರು ಚೀರಾಡುತ್ತಿರುವ ದೃಶ್ಯ, ಪ್ರಾರ್ಥಿಸುತ್ತಿರುವ ದೃಶ್ಯ ಸೆರೆಯಾಗಿದ್ದು, ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
Advertisement