
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಆಪರೇಷನ್ ಸಿಂಧೂರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಚುನಾವಣಾ ಲಾಭಕ್ಕಾಗಿ ಬಿಜೆಪಿ ಅದನ್ನು ರಾಜಕೀಯಗೊಳಿಸುತ್ತಿದೆ ಎಂದು ಮಂಗಳವಾರ ಆರೋಪಿಸಿದ್ದಾರೆ.
ಇಂದು ತಮ್ಮ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಮಾನ್, ಆಪರೇಷನ್ ಸಿಂಧೂರ್ ಯಶಸ್ಸಿನ ನಂತರ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಸಿಂಧೂರ ವಿತರಿಸುತ್ತಿದ್ದಾರೆ ಎಂದು ಆರೋಪಿಸಿದರು.
"ಇದು ತುಂಬಾ ದುಃಖಕರ. ಸಿಂಧೂರ್ ಅನ್ನು ಅಪಹಾಸ್ಯ ಮಾಡಲಾಗುತ್ತಿದೆ. ನೀವು ನೋಡಲಿಲ್ಲವೇ? ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಬಿಜೆಪಿ ಮತಗಳನ್ನು ಕೇಳುತ್ತಿದೆ. ಅವರು ಪ್ರತಿ ಮನೆಗೆ ಪ್ರಧಾನಿ ಮೋದಿ ಹೆಸರಿನಲ್ಲಿ ಸಿಂಧೂರ್ ಕಳುಹಿಸುತ್ತಿದ್ದಾರೆ. ಮೋದಿಯವರ ಹೆಸರಿನಲ್ಲಿ 'ಸಿಂಧೂರ್' ಹಚ್ಚಿಕೊಳ್ಳಲು ಯಾವ ವ್ಯಕ್ತಿ ತಾನೇ ತನ್ನ ಪತ್ನಿಗೆ ಹೇಳುತ್ತಾರೆ? ಇದು 'ಒಂದು ರಾಷ್ಟ್ರ, ಒಬ್ಬ ಪತಿ' ಯೋಜನೆಯೇ?" ಎಂದು ಪ್ರಶ್ನಿಸಿದರು.
ಲುಧಿಯಾನಾದಲ್ಲಿ ನಡೆಯುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಪರೇಷನ್ ಸಿಂದೂರ್ ಹೆಸರಿನಲ್ಲಿ ಮತ ಯಾಚಿಸುತ್ತಿದೆಯೇ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾನ್ ಅವರು, ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆದಾಗ್ಯೂ, ಅಂತಹ ಯಾವುದೇ ಅಭಿಯಾನವನ್ನು ಆರಂಭಿಸಿಲ್ಲ ಎಂದು ಬಿಜೆಪಿ ಮಾನ್ ಆರೋಪವನ್ನು ತಳ್ಳಿಹಾಕಿದೆ. ಅಲ್ಲದೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಳ್ಳಲು ನಡೆಸಲಾದ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಅಂತಹ ಹೇಳಿಕೆ ನೀಡಿದ ಮಾನ್ ಕ್ಷಮೆಯಾಚಿಸಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದೆ.
ಪಂಜಾಬ್ ಬಿಜೆಪಿ ವಕ್ತಾರ ಪ್ರೀತ್ಪಾಲ್ ಸಿಂಗ್ ಬಲ್ಲಿಯಾವಾಲ್ ಈ ಹೇಳಿಕೆ 'ನಾಚಿಕೆಗೇಡು' ಎಂದು ಟೀಕಿಸಿದ್ದಾರೆ. "ಅವರು ಆಪರೇಷನ್ ಸಿಂಧೂರವನ್ನು ಅಣಕಿಸುತ್ತಿದ್ದಾರೆ. ಬಿಜೆಪಿ ಪ್ರತಿ ಮನೆಗೆ ಸಿಂಧೂರ ಕಳುಹಿಸುತ್ತಿಲ್ಲ. ಭಯೋತ್ಪಾದಕರು ಹಿಂದೂಗಳನ್ನು ಅವರ ಧರ್ಮವನ್ನು ಪರಿಶೀಲಿಸಿ ಕೊಲ್ಲುತ್ತಿದ್ದರಿಂದ ಆಪರೇಷನ್ ಸಿಂಧೂರ ಎಂಬ ಹೆಸರನ್ನು ಬಳಸಲಾಗಿದೆ ಎಂದಿದ್ದಾರೆ.
ಈ ಕಾರ್ಯಾಚರಣೆ ಭಯೋತ್ಪಾದನೆ, ಹುತಾತ್ಮತೆ ಮತ್ತು ಭಾರತೀಯ ಜೀವಗಳ ರಕ್ಷಣೆಯ ಬಗ್ಗೆ. ಭಾರತೀಯ ಸೇನೆಯನ್ನು ಅಪಹಾಸ್ಯ ಮಾಡುವ, ವೀರ ನಾರಿಸ್ ಅವರನ್ನು ಅವಮಾನಿಸುವ ಮತ್ತು ಪ್ರತಿಯೊಂದು ಪವಿತ್ರ ಚಿಹ್ನೆಯನ್ನು ತಮಾಷೆಯಾಗಿ ಪರಿವರ್ತಿಸುವ ವ್ಯಕ್ತಿಗೆ ತ್ಯಾಗ, ಪ್ರೀತಿ ಮತ್ತು ಭಕ್ತಿಯನ್ನು ಹೊಂದಿರುವ ಸಿಂಧೂರದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದಿದ್ದಾರೆ.
26 ಪ್ರವಾಸಿಗರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ಅಭಿಯಾನ ನಡೆಸುವುದಾಗಿ ಘೋಷಿಸಿತ್ತು. ಇದರ ಭಾಗವಾಗಿ ಬಿಜೆಪಿ ಪ್ರತಿ ಮನೆಗೆ ಸಿಂಧೂರವನ್ನು ಕಳುಹಿಸುವುದಾಗಿ ಘೋಷಿಸಿದೆ ಎಂದು ವರದಿಗಳು ಬಂದಿದ್ದವು. ಆದರೆ ಬಿಜೆಪಿ ಈ ವರದಿಗಳನ್ನು ತಳ್ಳಿ ಹಾಕಿದೆ.
Advertisement