
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಪರೇಷನ್ ಸಿಂಧೂರ್ ಕುರಿತು ಸಭೆ ನಡೆಸಿದ್ದ ಇಂಡಿಯಾ ಬ್ಲಾಕ್ ಪಕ್ಷಗಳು, 16 ವಿರೋಧ ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಆಪರೇಷನ್ ಸಿಂಧೂರ್ ಕುರಿತು ಸಂಸತ್ ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಜನತಾದಳ, ಸಮಾಜವಾದಿ ಪಕ್ಷ ಮತ್ತು ಶಿವಸೇನೆ(ಯುಬಿಟಿ) ಸೇರಿದಂತೆ ಹಲವಾರು ಪಕ್ಷಗಳ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಸಂಸತ್ ವಿಶೇಷ ಅಧಿವೇಶನ ನಡೆಸಬೇಕು ಎಂದು ಆಗ್ರಹಿಸಿ ಪ್ರಧಾನಿ ಮೋದಿಗೆ ಬರೆದ ಪತ್ರಕ್ಕೆ ಇಂಡಿಯಾ ಬ್ಲಾಕ್ ಸಂಸದರು ಸಹಿ ಹಾಕಿದ್ದಾರೆ ಎಂದು ವಿರೋಧ ಪಕ್ಷಗಳ ನಾಯಕರು ತಿಳಿಸಿದ್ದಾರೆ.
ಕಾಂಗ್ರೆಸ್‌ನ ಜೈರಾಮ್ ರಮೇಶ್ ಮತ್ತು ದೀಪೇಂದ್ರ ಹೂಡಾ, ಟಿಎಂಸಿ ನಾಯಕ ಡೆರೆಕ್ ಒ'ಬ್ರೇನ್, ಎಸ್‌ಪಿಯ ರಾಮಗೋಪಾಲ್ ಯಾದವ್, ಆರ್‌ಜೆಡಿಯ ಮನೋಜ್ ಝಾ ಮತ್ತು ಶಿವಸೇನೆ(ಯುಬಿಟಿ)ಯ ಸಂಜಯ್ ರಾವತ್ ಸಭೆಯಲ್ಲಿ ಭಾಗವಹಿಸಿದ್ದರು.
ಡಿಎಂಕೆ ಕೂಡ ಪ್ರಧಾನಿ ಮೋದಿಗೆ ಬರೆದ ಪತ್ರಕ್ಕೆ ಸಹಿ ಮಾಡಿದೆ. ಆದರೆ ಕರುಣಾನಿಧಿ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಪಕ್ಷ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
ನ್ಯಾಷನಲ್ ಕಾನ್ಫರೆನ್ಸ್, ಸಿಪಿಐ(ಎಂ), ಐಯುಎಂಎಲ್, ಸಿಪಿಐ, ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ(ಆರ್‌ಎಸ್‌ಪಿ), ಕೇರಳ ಕಾಂಗ್ರೆಸ್, ಎಂಡಿಎಂಕೆ, ಸಿಪಿಐ(ಎಂಎಲ್) ಲಿಬರೇಶನ್ ಕೂಡ ಪತ್ರಕ್ಕೆ ಸಹಿ ಹಾಕಿವೆ ಎಂದು ವಿರೋಧ ಪಕ್ಷದ ನಾಯಕರು ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷ(ಎಎಪಿ) ಸಭೆಗೆ ಗೈರಾಗಿದ್ದರೂ ಈ ಬೇಡಿಕೆಯೊಂದಿಗೆ ಪ್ರಧಾನಿಗೆ ಪ್ರತ್ಯೇಕ ಪತ್ರ ಬರೆಯಲಿದೆ.
ಆದಾಗ್ಯೂ, ವಿಶೇಷ ಅಧಿವೇಶನಕ್ಕೆ ಒತ್ತಾಯಿಸುತ್ತಿರುವ ಪಕ್ಷಗಳಲ್ಲಿ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ(ಎಸ್‌ಪಿ) ಇಲ್ಲ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಹಲವಾರು ವಿರೋಧ ಪಕ್ಷಗಳು ಸಂಸತ್ ವಿಶೇಷ ಅಧಿವೇಶನಕ್ಕೆ ಒತ್ತಾಯಿಸುತ್ತಿವೆ. ಆಪರೇಷನ್ ಸಿಂಧೂರ್ ಬಗ್ಗೆ ಸಂಸದರಿಗೆ ಮಾಹಿತಿ ನೀಡಲು ಕರೆದಿದ್ದ ಸರ್ವಪಕ್ಷ ಸಭೆಯಲ್ಲಿಯೂ ಈ ಬೇಡಿಕೆ ಇಡಲಾಗಿತ್ತು.
Advertisement