
ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಕುರಿತು ಚರ್ಚೆಗಾಗಿ ಸಂಸತ್ತಿನ ವಿಶೇಷ ಅಧಿವೇಶನ ನಡೆಸುವಂತೆ ಪ್ರತಿಪಕ್ಷಗಳು ಆಗ್ರಹಗಳನ್ನು ವ್ಯಕ್ತಪಡಿಸುತ್ತಿದ್ದು, ಈ ನಡುವೆ ಕೇಂದ್ರ ಸರ್ಕಾರ ವಿಶೇಷ ಅಧಿವೇಶನದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪ್ರತಿಪಕ್ಷಗಳು ವಿಶೇಷ ಅಧಿವೇಶನಕ್ಕೆ ಆಗ್ರಹಿಸುತ್ತಿವೆ. ಆದರೆ, ಅದರ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ.
ಸರ್ವಪಕ್ಷ ಸಭೆಯಲ್ಲಿ ಪಹಲ್ಗಾಮ್ ದಾಳಿಯ ಬಗ್ಗೆ ಎಲ್ಲಾ ಅಗತ್ಯ ವಿವರಗಳನ್ನು ಸರ್ಕಾರ ಹಂಚಿಕೊಂಡಿದೆ. ಆಪರೇಷನ್ ಸಿಂಧೂರ್ ಕುರಿತ ಮಾಹಿತಿಯನ್ನು ನಿರಂತರವಾಗಿ ಸೂಕ್ತ ಮಾರ್ಗಗಳ ಮೂಲಕ ಹಂಚಿಕೊಳ್ಳಲಾಗಿದೆ. ಆದ್ದರಿಂದ ಸಂಸತ್ತಿನ ವಿಶೇಷ ಅಧಿವೇಶನದ ಅಗತ್ಯವಿಲ್ಲ ಎಂದು ಸರ್ಕಾರ ನಿರ್ಧರಿಸಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಮುಂಬರುವ ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂಧೂರ್ ಕುರಿತು ಚರ್ಚೆಗೆ ಗರಿಷ್ಠ ಸಮಯವನ್ನು ನಿಗದಿಪಡಿಸಲಾಗುವುದು, ಈ ಅಧಿವೇಶನ ಜೂನ್ ಮಧ್ಯದಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಕೇಂದ್ರದ ಆಡಳಿತಾರೂಢ ಮೋದಿ ಸರ್ಕಾರವು ಮೇ 25-26 ರಂದು ದೆಹಲಿಯಲ್ಲಿ ಆಪರೇಷನ್ ಸಿಂಧೂರ್ ಸೇರಿದಂತೆ ಇತ್ತೀಚಿನ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಜೊತೆಗೆ ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚಿಸಲು ಎನ್ಡಿಎ ಮುಖ್ಯಮಂತ್ರಿಗಳ ಸಭೆಯನ್ನು ನಿಗದಿಪಡಿಸಿದೆ ಎಂದು ತಿಳಿದುಬಂದಿದೆ. ಈ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಎನ್ಡಿಎ ಮುಖ್ಯಮಂತ್ರಿಗಳ ಜೊತೆ ಮೋದಿ ಸಭೆ ನಡೆಸುತ್ತಿರುವುದನ್ನು ಕಾಂಗ್ರೆಸ್ ಟೀಕಿಸಿದೆ. ಸೇನಾಪಡೆಗಳ ಕಾರ್ಯಾಚರಣೆಯಿಂದ "ರಾಜಕೀಯ ಲಾಭ" ಪಡೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯತ್ನಿಸುತ್ತಿದ್ದಾರೆಂದು ಆರೋಪಿಸಿದೆ.
ಆಪರೇಷನ್ ಸಿಂಧೂರ್‌ನಿಂದ ರಾಜಕೀಯ ಲಾಭ ಪಡೆಯಲು ಪ್ರಧಾನಿ ಮೋದಿಯವರು ಮೇ 25 ರಂದು ಕೇವಲ ಎನ್‌ಡಿಎ ಮುಖ್ಯಮಂತ್ರಿಗಳ ಸಭೆಗೆ ಕರೆ ನೀಡಿದ್ದಾರೆ. ಆದರೆ, ಪಾಕಿಸ್ತಾನದ ಭಯೋತ್ಪಾದನೆಯ ಬಗ್ಗೆ ಭಾರತದ ನಿಲುವನ್ನು ವಿವರಿಸಲು ಎಲ್ಲಾ ಪಕ್ಷಗಳ ಸಂಸದರ ನಿಯೋಗ ವಿದೇಶಕ್ಕೆ ಹೋಗಬೇಕೆಂದು ಬಯಸುತ್ತಿದ್ದಾರೆಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಟೀಕಿಸಿದ್ದಾರೆ.
Advertisement