
ಪುಣೆ: ಭಾರತದ ಮೇಲೆ ದಾಳಿ ಮಾಡುವ ಪಾಕಿಸ್ತಾನದ 48 ಗಂಟೆಗಳ ಪ್ಲಾನ್ ಕೇವಲ 8 ಗಂಟೆಯಲ್ಲೇ ಉಡೀಸ್ ಆಗಿ ಕದನ ವಿರಾಮ ಒಪ್ಪಂದಕ್ಕೆ ಕೇಳುವ ಮೂಲಕ ಮಂಡಿಯೂರಿತು ಎಂದು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಮಂಗಳವಾರ ಹೇಳಿದ್ದಾರೆ.
ಪುಣೆಯ ಸಾವಿತ್ರಿ ಬಾಯಿ ಪುಲೆ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಜನರಲ್ ಚೌಹಾಣ್ ಅವರು ಮೇ 10 ರ ಘಟನೆಗಳನ್ನು ವಿವರಿಸಿದರು. ಎರಡು ದಿನಗಳಲ್ಲಿ ಭಾರತ ಮಂಡಿಯೂರುವಂತೆ ಮಾಡುವ ಉದ್ದೇಶದಿಂದ ಪಾಕಿಸ್ತಾನವು ಅನೇಕ ಸಂಘಟಿತ ದಾಳಿಗಳನ್ನು ಪ್ರಾರಂಭಿಸಿತ್ತು. 48 ಗಂಟೆಗಳಲ್ಲಿ ಭಾರತವನ್ನು ಮಂಡಿಯೂರುವಂತೆ ಮಾಡುವ ಉದ್ದೇಶದಿಂದ ಅನೇಕ ಕಡೆಗಳಲ್ಲಿ ದಾಳಿ ಮಾಡಿತ್ತು. ಇದರೊಂದಿಗೆ ಉದ್ವಿಗ್ನತೆ ಉಂಟಾಗಿತ್ತು. ನಾವು ನಿಜವಾಗಿಯೂ ಭಯೋತ್ಪಾದಕರನ್ನು ಮಾತ್ರ ಗುರಿಯಾಗಿಸಿ ಹೊಡೆದಿದ್ದೇವೆ ಎಂದರು.
ಉದ್ವಿಗ್ನತೆ ವೇಳೆ ಸೇನಾ ಕಾರ್ಯಾಚರಣೆ 48 ಗಂಟೆಗಳ ಕಾಲ ಮುಂದುವರೆಯುತ್ತದೆ ಎಂದು ಅವರು ಭಾವಿಸಿದ್ದರು. ಆದರೆ ಅದು ಕೇವಲ 8 ಗಂಟೆಗಳಲ್ಲಿಯೇ ಉಡೀಸ್ ಆಗಿ ದೂರವಾಣಿ ಮೂಲಕ ಮಾತುಕತೆಗೆ ಮುಂದಾದರು.
ಮೇ 7 ರಂದು ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ ಭಾರತವು ಪಾಕಿಸ್ತಾನಕ್ಕೆ ಮಾಹಿತಿ ನೀಡಿತ್ತು. ಅಲ್ಲದೇ ಯಾವುದೇ ರೀತಿಯ ಉದ್ವಿಗ್ನತೆಗೆ ಮುಂದಾದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿತ್ತು ಎಂದು ಅನಿಲ್ ಚೌಹಾಣ್ ತಿಳಿಸಿದರು.
ಮೇ 7 ರಂದು ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದ ದಿನವೇ ನಾವು ಪಾಕಿಸ್ತಾನಕ್ಕೆ ತಿಳಿಸಲಾಗಿತ್ತು. ಪಾಕಿಸ್ತಾನದ ಕಡೆಯಿಂದ ನಮ್ಮ ಮಿಲಿಟರಿ ನೆಲೆಗಳು, ಕಟ್ಟಡಗಳನ್ನು ಗುರಿಯಾಗಿಸಿ ದಾಳಿ ನಡೆಸಿದರೆ ನಾವು ಕೂಡಾ ಪ್ರತಿದಾಳಿ ನಡೆಸಿ, ತಿರುಗೇಟು ನೀಡುವುದಾಗಿ ಎಚ್ಚರಿಕೆ ನೀಡಲಾಗಿತ್ತು ಎಂದು ಅವರು ತಿಳಿಸಿದರು.
ತಾತ್ಕಾಲಿಕ ನಷ್ಟದಿಂದ ಮಿಲಿಟರಿ ಪಡೆ ಬಾಧಿತವಾಗಿಲ್ಲ: ತಾತ್ಕಾಲಿಕ ನಷ್ಟಗಳಿಂದ ವೃತ್ತಿಪರ ಮಿಲಿಟರಿ ಪಡೆ ಬಾಧಿತವಾಗಿಲ್ಲ. ಏಕೆಂದರೆ ಆದ ನಷ್ಟಕ್ಕಿಂತಲೂ ಫಲಿತಾಂಶವೇ ಹೆಚ್ಚಾಗಿದೆ. ಅಪಾರ ನಷ್ಟವನ್ನುಂಟುಮಾಡುವುದು ಪಾಕಿಸ್ತಾನದ ಉದ್ದೇಶವಾಗಿತ್ತು. ಆದರೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮೂಲಕ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಸಂಪೂರ್ಣ ಹೊಸದಾದ ಕ್ರಮ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ನಷ್ಟಕ್ಕಿಂತ ಫಲಿತಾಂಶ ಮುಖ್ಯ: ಆಪರೇಷನ್ ಸಿಂಧೂರ್ ಆರಂಭದಲ್ಲಿ ಭಾರತದ ಯುದ್ಧ ವಿಮಾನಗಳ ನಷ್ಟವನ್ನು ಒಪ್ಪಿಕೊಂಡಿದ್ದಕ್ಕೆ ಕೇಳಿಬಂದ ಟೀಕೆಗಳನ್ನು ನಿರಾಕರಿಸಿದರು. ಆಪರೇಷನ್ ಸಿಂಧೂರ ಕಾರ್ಯಾಚರಣೆ ಸಮಯದಲ್ಲಿ ಉಂಟಾದ ನಷ್ಟ ಫಲಿತಾಂಶಕ್ಕೆ ಹೋಲಿಸಿದರೆ ಗೌಣವಾಗಿವೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆಪರೇಷನ್ ಸಿಂಧೂರ್ ವೇಳೆಯಲ್ಲಿ ಆದ ನಷ್ಟ ಹಾಗೂ ಅಂಕಿಅಂಶಗಳ ಬಗ್ಗೆ ಅತ್ಯಂತ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಯುದ್ಧದ ವೇಳೆ ಹಿನ್ನಡೆಯೂ ಆಗುತ್ತದೆ. ನೈತಿಕತೆ ಕಾಪಾಡಿಕೊಳ್ಳಬೇಕಾದ ಅಗತ್ಯವಿರುತ್ತದೆ. ನಷ್ಟ ಪ್ರಮುಖವಾಗಲ್ಲ. ಆದರೆ ಪ್ರತಿಫಲ ಏನಾಯಿತು ಎಂಬುದು ಪ್ರಮುಖವಾಗಿರುತ್ತದೆ ಎಂದರು.
ಪಹಲ್ಗಾಮ್ ಘಟನೆ ಗಂಭೀರ ಮಾನವೀಯ ಕ್ರೌರ್ಯ: ಭಾರತ ಮತ್ತು ಹಿಂದೂಗಳ ವಿರುದ್ಧ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನಿರ್ ದ್ವೇಷಕಾರಿ ಭಾಷಣ ಮಾಡಿದ ಕೆಲವೇ ವಾರಗಳಲ್ಲಿ ನಡೆದ ಪಹಲ್ಗಾಮ್ ಘಟನೆಯನ್ನು “ಗಂಭೀರ ಮಾನವೀಯ ಕ್ರೌರ್ಯ' ಎಂದು ಕರೆದರು.
ಪಾಕ್ ಪ್ರಯೋಜಿತ ಭಯೋತ್ಪಾದನೆ ನಿಲ್ಲಿಸುವ ಉದ್ದೇಶದಿಂದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಲಾಯಿತು. ಪಾಕಿಸ್ತಾನ ಭಾರತವನ್ನು ಭಯೋತ್ಪಾದನೆಗೆ ಒತ್ತೆಯಾಳಾಗಿ ಇಡಲು ಸಾಧ್ಯವಾಗಬಾರದು. ಭಾರತವು ಭಯೋತ್ಪಾದನೆ ಮತ್ತು ಪರಮಾಣು ಬ್ಲ್ಯಾಕ್‌ಮೇಲ್‌ನ ನೆರಳಿನಲ್ಲಿ ಬದುಕಲ್ಲ ಎಂದರು.
Advertisement