ಅಯೋಧ್ಯೆ: ರಾಮ ಮಂದಿರಕ್ಕೆ ಎಲೋನ್ ಮಸ್ಕ್ ತಂದೆ ಭೇಟಿ, ಹೇಳಿದ್ದೇನು?
ಅಯೋಧ್ಯೆ: ಟೆಕ್ ಬಿಲೇನಿಯರ್ ಎಲೋನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಅವರು ಇಂದು ಮಧ್ಯಾಹ್ನ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಇಲ್ಲಿನ ಅನುಭವ ಅದ್ಬುತವಾಗಿತ್ತು. ತಾನು ಮಾಡಿದ ಅತ್ಯುತ್ತಮ ಕೆಲಸಗಳಲ್ಲಿ ಇದು ಒಂದಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ರಾಮಮಂದಿರ ಬಳಿಯ ಹನುಮನಗಿರಿ ದೇವಸ್ಥಾನದಲ್ಲಿಯೂ ಎರೋಲ್ ಮಸ್ಕ್ ಪೂಜೆ ಸಲ್ಲಿಸಿದ್ದಾರೆ. ಆರಂಭದಲ್ಲಿ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ ಅಲ್ಲಿ ತೀವ್ರ ಬಿಸಿ ವಾತಾವರಣದ ಕಾರಣ ಆ ಯೋಜನೆಯನ್ನು ಕೈಬಿಟ್ಟು ಅಯೋಧ್ಯೆಗೆ ಭೇಟಿ ನೀಡಿದರು.
ಈ ಕುರಿತು ಸುದ್ದಿಸಂಸ್ಥೆ ಪಿಟಿಐ ವಿಡಿಯೋ ಜೊತೆಗೆ ಮಾತನಾಡಿದ ಎರೋಲ್ ಮಸ್ಕ್, ಅಯೋಧ್ಯೆ ನೋಡಲು ಬಂದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದೊಂದು ದೊಡ್ಡ ದೇವಾಲಯವಾಗಿದ್ದು, ಪ್ರಪಂಚದ ಅದ್ಭುತವಾಗಿ ಪರಿಣಮಿಸುತ್ತದೆ ಎಂದು ತಿಳಿಸಿದ್ದಾರೆ.
ಎರಡೂ ದೇವಾಲಯಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತದಲ್ಲಿ ನನ್ನ ಅನುಭವ ಅದ್ಭುತವಾಗಿದೆ. ಭಾರತದಲ್ಲಿ Servotech ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸುತ್ತೇನೆ. ಇಲ್ಲಿಯೇ ಸಾಕಷ್ಟು ಸಮಯ ಕಳೆಯಲು ಎದುರು ನೋಡುತ್ತಿದ್ದೇನೆ. ದೇವಾಲಯ ಹಾಗೂ ಇಲ್ಲಿನ ಜನರ ಬಗ್ಗೆ ವರ್ಣಿಸಲು ಆಗದು ಎಂದಿದ್ದಾರೆ.
ಪುತ್ರಿ ಅಲೆಕ್ಸಾಂಡ್ರಾ ಮಸ್ಕ್ ಜೊತೆಯಲ್ಲಿ, ಎರೋಲ್ ಮಧ್ಯಾಹ್ನ 2.30 ರ ಸುಮಾರಿಗೆ ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಸಂಜೆ 4 ರ ನಂತರ ಹೊರಟರು. ರಾಮ ಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಕುರ್ತಾ-ಪೈಜಾಮಾ ಧರಿಸಿದ್ದರು. ಭೇಟಿಯ ವೇಳೆ ದೇವಾಲಯದ ಪಟ್ಟಣದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
Servotech Renewable Power System Ltd ಜಾಗತಿಕ ಸಲಹೆಗಾರರಾಗಿರುವ ಎರೋಲ್ ಅವರು ಜೂನ್ 1 ರಂದು ತಮ್ಮ ಭಾರತ ಪ್ರವಾಸವನ್ನು ಆರಂಭಿಸಿದ್ದು, ಜೂನ್ 6 ರವರೆಗೆ ದೇಶದಲ್ಲಿರುತ್ತಾರೆ ಎಂದು ಹರಿಯಾಣ ಮೂಲದ ಕಂಪನಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.