
ಬಿಜಾಪುರ: ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ತಲೆಗೆ 40 ಲಕ್ಷ ರೂ. ಬಹುಮಾನ ಹೊಂದಿದ್ದ ಹಿರಿಯ ಮಾವೋವಾದಿ ನಾಯಕನನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಬಸ್ತಾರ್ ಪ್ರದೇಶದಲ್ಲಿ ಸಿಪಿಐ(ಮಾವೋವಾದಿ) ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಅವರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ ಕೆಲವು ದಿನಗಳ ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಮಾವೋವಾದಿಗಳ ಕೇಂದ್ರ ಸಮಿತಿ ಸದಸ್ಯ ಗೌತಮ್ ಅಲಿಯಾಸ್ ಸುಧಾಕರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದು ನಕ್ಸಲರಿಗೆ ದೊಡ್ಡ ಹೊಡೆತ ನೀಡಿದೆ.
ಆದಾಗ್ಯೂ, ಸುಧಾಕರ್ ಅವರ ಸಾವನ್ನು ಇನ್ನೂ ಅಧಿಕೃತವಾಗಿ ಘೋಷಿಸಲಾಗಿಲ್ಲ.
ಹಿರಿಯ ನಕ್ಸಲ್ ನಾಯಕನ ಉಪಸ್ಥಿತಿಯ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ಭದ್ರತಾ ಸಿಬ್ಬಂದಿಯ ಜಂಟಿ ತಂಡ ಕಾರ್ಯಾಚರಣೆಗೆ ಹೊರಟಿದ್ದಾಗ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದ ಕಾಡಿನಲ್ಲಿ ಗುಂಡಿನ ಚಕಮಕಿ ನಡೆಯಿತು ಎಂದು ಬಸ್ತಾರ್ ರೇಂಜ್‌ನಲ್ಲಿ ನಿಯೋಜಿಸಲಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ವಿಶೇಷ ಕಾರ್ಯಪಡೆ, ಜಿಲ್ಲಾ ಮೀಸಲು ಪಡೆ, ಛತ್ತೀಸ್‌ಗಢ ಪೊಲೀಸರ ಎರಡೂ ಘಟಕಗಳು ಮತ್ತು ಕೋಬ್ರಾ ಪಡೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ಅವರು ಹೇಳಿದ್ದಾರೆ.
ಮಾವೋವಾದಿ ನಾಯಕ ಸುಧಾಕರ್, ತೆಲಂಗಾಣ ರಾಜ್ಯ ಸಮಿತಿ ಸದಸ್ಯ ಬಂಡಿ ಪ್ರಕಾಶ್, ದಂಡಕಾರಣ್ಯ ವಿಶೇಷ ವಲಯ ಸಮಿತಿ(ಡಿಕೆಎಸ್‌ಜೆಡ್‌ಸಿ) ಸದಸ್ಯ ಪಪ್ಪಾ ರಾವ್ ಮತ್ತು ಇತರ ಕೆಲವು ನಕ್ಸಲರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ದಾಳಿ ನಡೆಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement