
ಭೋಪಾಲ್: ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಶೌಚಾಲಯದ ಬಳಿ ಬೀದಿ ನಾಯಿಯೊಂದು ಸತ್ತ ನವಜಾತ ಶಿಶುವನ್ನು ತನ್ನ ದವಡೆಯಲ್ಲಿ ಹಿಡಿದುಕೊಂಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಭದ್ರತಾ ಸಿಬ್ಬಂದಿ ಪ್ರಾಣಿಯನ್ನು ಓಡಿಸಿ ಶವವನ್ನು ಹೊರತೆಗೆದಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಮ್ಹೋವ್‌ನಲ್ಲಿರುವ ಸಿವಿಲ್ ಆಸ್ಪತ್ರೆಯ ಅಧಿಕಾರಿಗಳು ಮತ್ತು ಪೊಲೀಸರು ನವಜಾತ ಶಿಶುವಿನ ಪೂರ್ವಾಪರಗಳು ಮತ್ತು ನಂತರದ ಘಟನೆಗಳ ಸರಪಳಿಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.
"ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಈ ಘಟನೆ ಬೆಳಗಿನ ಜಾವ 1:30 ರಿಂದ 2 ಗಂಟೆಯ ನಡುವೆ ನಡೆದಿದೆ. ಈ ಅವಧಿಯಲ್ಲಿ ಒಬ್ಬ ಯುವತಿಯು ಶೌಚಾಲಯಕ್ಕೆ ಹೋಗುತ್ತಿರುವುದು ಕಂಡುಬಂದಿದೆ. ನಾವು ಸಿಬ್ಬಂದಿಯೊಂದಿಗೆ ಪರಿಶೀಲಿಸಿದಾಗ, 17 ವರ್ಷದ ಬಾಲಕಿ ಹೊಟ್ಟೆನೋವು ಎಂದು ದೂರು ನೀಡಿ ಇಲ್ಲಿಗೆ ಬಂದಿದ್ದಳು ಮತ್ತು ಶುಕ್ರವಾರ ರಾತ್ರಿ 9 ಗಂಟೆಗೆ ದಾಖಲಾಗಿದ್ದಳು ಎಂದು ನಾವು ಕಂಡುಕೊಂಡಿದ್ದೇವೆ. ಬಾಲಕಿ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ನಾವು ಅನುಮಾನಿಸುತ್ತೇವೆ" ಎಂದು ಮ್ಹೋವ್ ಸಿವಿಲ್ ಆಸ್ಪತ್ರೆಯ ಉಸ್ತುವಾರಿ ಡಾ.ಎಚ್.ಆರ್. ವರ್ಮಾ ತಿಳಿಸಿದ್ದಾರೆ.
ಹುಡುಗಿ ಸ್ವಲ್ಪ ಸಮಯದ ನಂತರ ಅಪರಿಚಿತ ವ್ಯಕ್ತಿಯೊಂದಿಗೆ ಆಸ್ಪತ್ರೆಯಿಂದ ಕಣ್ಮರೆಯಾದಳು ಎಂದು ವರ್ಮಾ ಹೇಳಿದರು. ಇತರ ಅಧಿಕಾರಿಗಳು, ಬಹುಶಃ ಹೊಟ್ಟೆಯೊಳಗೇ ಸಾವನ್ನಪ್ಪಿ ಹುಟ್ಟಿದ್ದ ಶಿಶುವನ್ನು ಶೌಚಾಲಯ ಪ್ರದೇಶದಿಂದ ನಾಯಿಯೊಂದು ತೆಗೆದುಕೊಂಡು ಹೋಗಿದೆ, ನಂತರ ಭದ್ರತಾ ಸಿಬ್ಬಂದಿ ಶವವನ್ನು ಹೊರತೆಗೆದಿದ್ದಾರೆ ಎಂದು ಹೇಳಿದರು.
"ಶನಿವಾರ ಬೆಳಿಗ್ಗೆ ನಾವು ಮರಣೋತ್ತರ ಪರೀಕ್ಷೆ ನಡೆಸಿದ್ದೇವೆ ಮತ್ತು ಅದರ ವರದಿಗಾಗಿ ಕಾಯುತ್ತಿದ್ದೇವೆ. ಪ್ರಾಥಮಿಕ ವರದಿಯ ಪ್ರಕಾರ ಹೆರಿಗೆ ಅಕಾಲಿಕವಾಗಿದೆ ಎಂದು ಹೇಳಲಾಗಿದೆ. ಶವವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ ಮತ್ತು ಅವರಿಗೆ ಸಹಾಯ ಮಾಡಲು ನಾವು ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಒದಗಿಸುತ್ತೇವೆ" ಎಂದು ಡಾ. ವರ್ಮಾ ಹೇಳಿದರು.
Advertisement