
ಅಹ್ಮದಾಬಾದ್: ಸಾಕು ನಾಯಿಯ ದಾಳಿಗೆ 4 ತಿಂಗಳ ಪುಟ್ಟ ಹಸುಗೂಸೊಂದು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಗುಜರಾತ್ ನ ಅಹ್ಮದಾಬಾದ್ ನ Radhe Residency ಯಲ್ಲಿ ಈ ಘಟನೆ ನಡೆದಿದ್ದು, ಸಾಕು ನಾಯಿಯೊಂದು 4 ತಿಂಗಳ ಮಗುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಈ ಭೀಕರ ವಿಡಿಯೋ ಅಪಾರ್ಟ್ ಮೆಂಟ್ ಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮೂಲಗಳ ಪ್ರಕಾರ Radhe Residency ನಿವಾಸಿ ಪ್ರತೀಕ್ ಧಾಬಿ ಎಂಬುವವ ಸಹೋದರಿ ರಿಷಿಕಾ ಎಂಬುವವರು ತಮ್ಮ ನಾಲ್ಕು ತಿಂಗಳ ಹೆಣ್ಣು ಮಗುವನ್ನು ತೆಗೆದುಕೊಂಡು ಅಪಾರ್ಟ್ ಮೆಂಟ್ ಪಾರ್ಕಿಂಗ್ ಜಾಗದಲ್ಲಿ ಕುಳಿತಿದ್ದರು.
ಈ ವೇಳೆ ಅದೇ ಜಾಗಕ್ಕೆ ಮಹಿಳೆಯೊಬ್ಬರು ತಮ್ಮ Rottweiler ಸಾಕು ನಾಯಿಯನ್ನು ಕರೆತಂದಿದ್ದು, ಮಗುವನ್ನು ನೋಡುತ್ತಲೇ ನಾಯಿ ಮಗುವಿನ ಮೇಲೆ ಎರಗಿದೆ. ಈ ವೇಳೆ ನಾಯಿಗೆ ಹಗ್ಗ ಬಿಗಿಯಲಾಗಿತ್ತಾದರೂ ನಾಯಿ ಬಲವಾಗಿ ಹಿಡಿದು ಎಳೆದಿದ್ದರಿಂದ ನಾಯಿಯನ್ನು ನಿಯಂತ್ರಿಸಲು ಆಕೆಗೆ ಸಾಧ್ಯವಾಗಲಿಲ್ಲ.
ನೋಡ ನೋಡುತ್ತಲೇ ನಾಯಿ 4 ತಿಂಗಳ ಮಗುವಿನ ಮೇಲೆರಗಿದ್ದು ಮಗುವನ್ನು ಕಚ್ಚಿ ಎಳೆದಾಡಿದೆ. ನಾಯಿ ದಾಳಿಗೆ ಆತಂಕಗೊಂಡ ಮಗುವಿನ ತಾಯಿ ರಿಷಿಕಾ ಮಗುವನ್ನು ಕೆಳಗೆ ಬಿಟ್ಟಿದ್ದಾರೆ. ಬಳಿಕ ನಾಯಿ ಮಗು ಮೇಲೆ ಮತ್ತೆ ದಾಳಿ ಮಾಡಿದೆ. ಈ ವೇಳೆ ಅಲ್ಲಿಯೇ ಇದ್ದ ಸ್ಥಳೀಯರು ನಾಯಿಯಿಂದ ಮಗುವನ್ನು ಬೇರ್ಪಡಿಸಿ ಕೂಡಲೇ ಆಸ್ಪತ್ರೆಗೆ ಹೊತ್ತೊಯ್ದಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.
ಮಕ್ಕಳು ಆಟವಾಡುತ್ತಿದ್ದ ಜಾಗಕ್ಕೆ ಸಾಕು ನಾಯಿ ತಂದಿದ್ದೇಕೆ?
ಇನ್ನು Rottweiler ನಾಯಿ ಮಾಲಕಿ ಪಾರ್ಕಿಂಗ್ ಜಾಗಕ್ಕೆ ನಾಯಿ ತಂದಿದ್ದೇಕೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಹತ್ತಾರು ಮಕ್ಕಳು ಆಡುತ್ತಿದ್ದರು. ಅದಾಗ್ಯೂ ಮಹಿಳೆ ತನ್ನ ನಾಯಿಗೆ ಸೂಕ್ತ ರಕ್ಷಾ ಕವಚ (ಕಚ್ಚದಂತೆ ನಾಯಿ ಮೂತಿಗೆ ಹಾಕುವ ಕಪ್) ಹಾಕದೇ ಕರೆತಂದಿದ್ದರಿಂದಲೇ ಈ ಭೀಕರ ಘಟನೆ ನಡೆದಿದೆ. ಅಲ್ಲದೆ ಮಕ್ಕಳಿರುವ ಜಾಗಕ್ಕೆ ನಾಯಿಯನ್ನು ಏಕೆ ಕರೆತಂದರು ಎಂದು ಪ್ರಶ್ನಿಸಿದ್ದಾರೆ.
ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನಿಯಮಗಳ ಪ್ರಕಾರ, ಸಾಕು ನಾಯಿಗಳನ್ನು ನೋಂದಾಯಿಸುವುದು ಕಡ್ಡಾಯವಾಗಿದೆ. ಆದಾಗ್ಯೂ, ನಾಯಿಯ ಮಾಲೀಕರು ನೋಂದಣಿ ಮಾಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪ್ರಸ್ತುತ ರಿಷಿಕಾ ಅವರ ಕುಟುಂಬವು ನಾಯಿ ಮಾಲೀಕರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಸೊಸೈಟಿಯ ನಿವಾಸಿಗಳ ಪ್ರಕಾರ, ಹಿಂದೆಯೂ ಸಹ ನಾಯಿ ಇಬ್ಬರನ್ನು ಕಚ್ಚಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದ್ದಾರೆ.
Advertisement