
ನವದೆಹಲಿ: ದೇಶಾದ್ಯಂತ ಮುಸ್ಲಿಮರು ಈದ್ ಉಲ್ ಅದಾ( ಬಕ್ರೀದ್) ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಬೆಳಗ್ಗೆಯೇ ಸಾಂಪ್ರದಾಯಿಕ ಉಡುಪು ಧರಿಸಿ ಮಸೀದಿಗಳಲ್ಲಿ ತೆರಳಿದ ಹಿರಿಯ, ಕಿರಿಯ ಮುಸ್ಲಿಮರು, ಮಕ್ಕಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ನವದೆಹಲಿ, ಕೋಲ್ಕತ್ತ, ಭೋಪಾಲ್, ಮುಂಬೈ, ಬೆಂಗಳೂರು, ತಿರುವನಂತಪುರ, ಚೆನ್ನೈ ಸೇರಿದಂತೆ ದೇಶಾದ್ಯಂತ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಂಬೈನ ಸಮುದ್ರದ ಮಧ್ಯದಲ್ಲಿರುವ ಹಾಜಿ ಆಲಿ ದರ್ಗಾಕ್ಕೆ ತೆರಳಿದ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದದ್ದು ವಿಶೇಷವಾಗಿತ್ತು.
ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರಿಗೆ ಸಿಖ್ ಸಮುದಾಯದವರು ಹಣ್ಣಿನ ರಸ, ನೀರು ಮತ್ತು ಡ್ರೈ ಪ್ರೂಟ್ಸ್ ನನೀಡುವ ಮೂಲಕ ಹಬ್ಬದ ಶುಭಾಶಯ ಕೋರಿದರು.
ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಗಡಿ ಭದ್ರತಾ ಪಡೆ ಸಿಬ್ಬಂದಿ ಹಾಗೂ ಬಾಂಗ್ಲಾದೇಶ ಗಡಿ ಭದ್ರತಾ ಪಡೆ ಸಿಬ್ಬಂದಿ ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.
ಬೆಂಗಳೂರಿನ ಕಂಟೋನ್ಮೆಂಟ್ ಸಮೀಪದ ಖುದ್ದೂಸಾ ಈದ್ಗಾ ಮೈದಾನ, ಚಾಮರಾಜಪೇಟೆಯ ಈದ್ಗಾ ಮೈದಾನ, ಬನ್ನೇರುಘಟ್ಟ ರಸ್ತೆಯಲ್ಲಿನ ಈದ್ಗಾ ಮೈದಾನ ಸೇರಿದಂತೆ ವಿವಿಧ ಮೈದಾನ ಮತ್ತು ಸಮೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು..
ಈದ್ ಉಲ್ ಅದಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದ್ದು, ಈ ಹಬ್ಬವು ಸಮಾಜದಲ್ಲಿ ಸಾಮರಸ್ಯವನ್ನು ಪ್ರೇರೇಪಿಸಿ, ಶಾಂತಿಯನ್ನು ಬಲಪಡಿಸಲಿ. ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಮೃದ್ಧಿ ತರಲಿ ಎಂದು ಹಾರೈಸುವುದಾಗಿ ತಿಳಿಸಿದ್ದಾರೆ.
ತ್ಯಾಗ - ಬಲಿದಾನದ ಸಂಕೇತವಾದ ಬಕ್ರೀದ್ ಸಮಾಜದಲ್ಲಿ ಶಾಂತಿ - ಸೌಹಾರ್ದತೆ ಬೆಳೆಯಲು ಪ್ರೇರಕ ಶಕ್ತಿಯಾಗಲಿ ಎಂದು ಹಾರೈಸುವುದಾಗಿ ಸಿಎಂ ಸಿದ್ದರಾಮಯ್ಯ ಎಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.
Advertisement