
ಮಾಸ್ಕೋ: ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ವಿಷಯದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಾರೆ ಎಂಬ ಹೇಳಿಕೆಯನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಹಾಯಕ ಯೂರು ಉಶಕೋವ್ ಅನುಮೋದಿಸಿದ್ದಾರೆ.
ಇತ್ತೀಚಿಗಿನ ಟ್ರಂಪ್ ಮತ್ತು ವ್ಲಾಡಿಮಿರ್ ಪುಟಿನ್ ನಡುವಿನ ದೂರವಾಣಿ ಮಾತುಕತೆಯಲ್ಲಿ ಭಾರತ- ಪಾಕಿಸ್ತಾನ ನಡುವಿನ ಉದ್ನಿಗ್ನತೆ ಶಮನದಲ್ಲಿ ಡೊನಾಲ್ಡ್ ಟ್ರಂಪ್ ವೈಯಕ್ತಿಕವಾಗಿ ತೊಡಗಿಸಿಕೊಂಡಿದ್ದರ ಕುರಿತು ಚರ್ಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಧ್ಯ ಪ್ರಾಚ್ಯ ರಾಷ್ಟ್ರಗಳ ಕುರಿತು ಚರ್ಚಿಸಿದ ಜೊತೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಶಸ್ತ್ರ ಸಂಘರ್ಷವನ್ನು ಅಧ್ಯಕ್ಷ ಟ್ರಂಪ್ ಅವರ ಮಧ್ಯಸ್ಥಿಕೆಯಿಂದ ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದರು.
ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಮಾತುಕತೆ ಮೂಲಕ ಕದನ ವಿರಾಮ ಒಪ್ಪಂದಕ್ಕೆ ಸಮ್ಮತಿ ನೀಡಿದ್ದಾರೆ. ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ ಎಂದು ಭಾರತ ಸರ್ಕಾರದ ಮೂಲಗಳು ಹೇಳಿವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಶಮನಕ್ಕೆ ನಾನು ನೆರವಾಗಿದ್ದೇನೆ. ಸಂಘರ್ಷ ನಿಲ್ಲಿಸಿದರೆ ಮಾತ್ರ ಅವರೊಂದಿಗೆ ಸಾಕಷ್ಟು ವ್ಯಾಪಾರ-ವಹಿವಾಟು ನಡೆಸಲಿದೆ ಅಮೆರಿಕ ಹೇಳಿರುವುದಾಗಿ ಟ್ರಂಪ್ ಪದೇ ಪದೇ ಹೇಳುತ್ತಿದ್ದರು.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಉಗ್ರರ ಗುಂಡಿಗೆ ಬಲಿಯಾದ ನಂತರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿಟ್ಟುಕೊಂಡು ಭಾರತ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತ್ತು.
ನಾಲ್ಕು ದಿನಗಳ ತೀವ್ರ ಗಡಿಯಾಚೆಗಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನವು ಮೇ 10 ರಂದು ಕದನ ವಿರಾಮ ಒಪ್ಪಂದ ಜಾರಿಗೆ ಸಮ್ಮತಿ ನೀಡಿದ್ದವು. ಇದರಲ್ಲಿ ಯಾವುದೇ ಮೂರನೇ ವ್ಯಕ್ತಿ ಭಾಗಿಯಾಗಿಲ್ಲ ಎಂದು ಭಾರತ ಸರ್ಕಾರದ ಮೂಲಗಳು ಸಮರ್ಥಿಸಿಕೊಂಡಿವೆ.
Advertisement