
ನ್ಯೂಯಾರ್ಕ್: ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಂತರ ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಾಗುವಂತೆ ಮಾಡಿದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಲ್ಲ ಎಂದು ಭಾರತ ಈಗಾಗಲೇ ಹಲವು ಬಾರಿ ಸ್ಪಷ್ಟನೆ ನೀಡಿದೆ.
ಈಗ ಮತ್ತೊಮ್ಮೆ ಇದೇ ವಿಷಯ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಬಂದಿದ್ದು, ಟ್ಯಾರೀಫ್ (ಸುಂಕ ಹೆಚ್ಚಳ) ಬೆದರಿಕೆ ಹಾಕಿ ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಾಗುವಂತೆ ಮಾಡಿದರು ಎಂಬ ಬಗ್ಗೆ ವರದಿಗಳು ಪ್ರಕಟವಾಗತೊಡಗಿವೆ.
ಕದನ ವಿರಾಮ ಘೋಷಣೆ ಮಾಡದೇ ಇದ್ದರೆ ಹೆಚ್ಚಿನ ಸುಂಕ ವಿಧಿಸುತ್ತೇನೆ, ಕದನ ವಿರಾಮ ಘೋಷಿಸಿ, ವ್ಯಾಪಾರ ಮುಂದುವರೆಸಿ ಎಂದು ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದರು ಎಂದು ವರದಿಗಳು ಪ್ರಕಟವಾಗಿವೆ. ಈ ಬಗ್ಗೆ ಭಾರತ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿದ್ದು, ಭಾರತ-ಪಾಕಿಸ್ತಾನ ನಡುವಿನ ಸಂಘರ್ಷದ ವಿಷಯದ ಕುರಿತ ಚರ್ಚೆಯಲ್ಲಿ ಟ್ಯಾರೀಫ್ (ಸುಂಕ ಹೆಚ್ಚಳ) ಬಗ್ಗೆ ಪ್ರಸ್ತಾಪವಾಗಿಲ್ಲ ಎಂದು ಭಾರತ ಸ್ಪಷ್ಟನೆ ನೀಡಿದೆ.
ಅಮೆರಿಕ ನ್ಯಾಯಾಲಯ ಟ್ರಂಪ್ ಟ್ಯಾರೀಫ್ ಹುಚ್ಚಾಟಕ್ಕೆ ಬ್ರೇಕ್ ಹಾಕಿದೆ. ಅಲ್ಲಿನ ನ್ಯಾಯಾಲಯದಲ್ಲಿ ಅಮೆರಿಕ ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಟ್ರಂಪ್ ಅವರ ಸುಂಕಗಳು ಶಾಂತಿಯನ್ನು ಕಾಪಾಡುತ್ತಿವೆ ಎಂದು ಹೇಳಿ ಭಾರತ- ಪಾಕ್ ನಡುವಿನ ಕದನ ವಿರಾಮ ಘೋಶಣೆಯನ್ನು ಉಲ್ಲೇಖಿಸಿದ್ದರು.
ಆಪರೇಷನ್ ಸಿಂದೂರ್ ಸಮಯದಲ್ಲಿ ಅಮೆರಿಕದೊಂದಿಗೆ ಮಾತುಕತೆಗಳು ನಡೆದಿದ್ದು ನಿಜ, ಆದರೆ ಟ್ರಂಪ್ ಅವರ ಸುಂಕಗಳು ಆ ಸಂಭಾಷಣೆಗಳ ಭಾಗವಾಗಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
"ಮೇ 7 ರಂದು ಆಪರೇಷನ್ ಸಿಂದೂರ್ ಪ್ರಾರಂಭವಾದ ಸಮಯದಿಂದ ಮೇ 10 ರಂದು ನಿಲ್ಲಿಸುವ ಸಮಯದವರೆಗೆ, ಭಾರತ ಮತ್ತು ಯುಎಸ್ ನಡುವೆ ಸಂಭಾಷಣೆ ನಡೆದಿತ್ತು. (ಆದರೆ) ಈ ಚರ್ಚೆಗಳಲ್ಲಿ ಸುಂಕಗಳ ವಿಷಯ ಎಂದಿಗೂ ಬರಲಿಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಆಪರೇಷನ್ ಸಿಂದೂರ್ ನಂತರ ಭಾರತ ಮತ್ತು ಪಾಕಿಸ್ತಾನವನ್ನು ಹಿಂದಕ್ಕೆ ಸರಿಯುವಂತೆ ಮನವೊಲಿಸುವಲ್ಲಿ ಸುಂಕಗಳು ಪ್ರಮುಖವಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕದ ನ್ಯಾಯಾಲಯದಲ್ಲಿ ಅತಿರೇಕದ ಹೇಳಿಕೆ ನೀಡಿದ್ದರು.
ಜಾಗತಿಕ ಸಮಸ್ಯೆಗಳನ್ನು "ಸರಿಪಡಿಸಲು" ಟ್ರಂಪ್ ಪ್ರಮುಖ ವ್ಯಾಪಾರ ಪಾಲುದಾರರು ಸೇರಿದಂತೆ ವಿದೇಶಿ ರಾಷ್ಟ್ರಗಳಿಗೆ ಹೆಚ್ಚಿನ ಆಮದು ಸುಂಕಗಳೊಂದಿಗೆ ಎಚ್ಚರಿಕೆ ನೀಡುತ್ತಿದ್ದಾರೆ ಎಂದು ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ನ್ಯಾಯಾಲಯಕ್ಕೆ ತಿಳಿಸಿದರು. ಕದನ ವಿರಾಮ ಮತ್ತು ಅಮೆರಿಕದ ರಫ್ತುಗಳ ಮೇಲಿನ ಸುಂಕಗಳನ್ನು ಕಡಿಮೆ ಮಾಡಲು ಚೀನಾವನ್ನು ಒತ್ತಾಯಿಸುವ ಉದಾಹರಣೆಗಳನ್ನು ನೀಡಿದ್ದಾರೆ.
ಟ್ರಂಪ್ ತನ್ನ ಸುಂಕಗಳನ್ನು ಹಿಂದಕ್ಕೆ ಪಡೆಯುವಂತೆ ಆದೇಶಿಸಿದರೆ, ಪರಮಾಣು ಶಕ್ತಿಗಳಾದ ಭಾರತ ಮತ್ತು ಪಾಕಿಸ್ತಾನ ಮಿಲಿಟರಿ ಸಂಘರ್ಷವನ್ನು ಪುನರಾರಂಭಿಸಬಹುದು ಎಂದು ಲುಟ್ನಿಕ್ ಮತ್ತು ರುಬಿಯೊ ವಾದಿಸಿದ್ದರು.
Advertisement