
ನವದೆಹಲಿ: ಈಶಾನ್ಯ ದೆಹಲಿಯ ದಯಾಳ್‌ಪುರ ಪ್ರದೇಶದಲ್ಲಿ ಒಂಬತ್ತು ವರ್ಷದ ಬಾಲಕಿಯೊಬ್ಬಳನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿಸಿದ ಹೃದಯವಿದ್ರಾವಕ ಘಟನೆ ನಡೆದಿದೆ. ಕುಟುಂಬ ಸದಸ್ಯರು ಮತ್ತು ಸ್ಥಳೀಯರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆಗೈಯಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಈ ಪ್ರದೇಶದಲ್ಲಿ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆರೋಪಿ ಬಾಲಕಿಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲೈಂಗಿಕ ದೌರ್ಜನ್ಯ ಸೇರಿದಂತೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿಯ ಸಾವಿಗೆ ಕಾರಣವನ್ನು ದೃಢೀಕರಿಸಲು ನಾವು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ. ನಾವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೆಹರು ವಿಹಾರ್ ನಿವಾಸಿಯಾಗಿರುವ ಬಾಲಕಿ ಸಂಜೆ 7 ಗಂಟೆ ಸುಮಾರಿಗೆ ಹತ್ತಿರದಲ್ಲಿ ವಾಸಿಸುವ ಸಂಬಂಧಿಕರಿಗೆ ಐಸ್ ಕ್ರೀಮ್ ಕೊಡಲು ಹೋಗಿದ್ದಳು. ಎಷ್ಟು ಹೊತ್ತಾದರೂ ಮನೆಗೆ ಬರದಿದ್ದಾಗ ಪೋಷಕರು ಆಕೆಯನ್ನು ಹುಡುಕಲು ಪ್ರಾರಂಭಿಸಿದರು. ಹಲವಾರು ಸಂಬಂಧಿಕರು ಮತ್ತು ನೆರೆಹೊರೆಯವರನ್ನು ಸಂಪರ್ಕಿಸಿದರು, ಒಬ್ಬ ಸಂಬಂಧಿಕರ ಮನೆಗೆ ಬಾಲಕಿ ಭೇಟಿ ನೀಡಿದ ಸ್ವಲ್ಪ ಸಮಯ ನಂತರ ಯಾರೂ ಅವಳನ್ನು ನೋಡಿರಲಿಲ್ಲ.
ಬಾಲಕಿಯ ತಂದೆ ಮನೆಗೆ ತಲುಪಿದಾಗ ಅದು ಲಾಕ್ ಆಗಿತ್ತು. ಏನೋ ತಪ್ಪಾಗಿದೆ ಎಂದು ಅನುಮಾನಿಸಿ, ಬೀಗ ಮುರಿದು ಕೋಣೆಗೆ ಪ್ರವೇಶಿಸಿದರು. ಒಳಗೆ, ತನ್ನ ಮಗಳು ರಕ್ತಸಿಕ್ತ ಸೂಟ್‌ಕೇಸ್‌ನಲ್ಲಿ ತುಂಬಿರುವುದನ್ನು ಕಂಡು ಹೌಹಾರಿದರು. ಅವಳನ್ನು ಸ್ಥಳೀಯ ಚಿಕಿತ್ಸಾಲಯಕ್ಕೆ ಕರೆದೊಯ್ದರು, ಶಾಸ್ತ್ರಿ ಪಾರ್ಕ್‌ನಲ್ಲಿರುವ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಯಲ್ಲಿ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು.
ಘಟನೆಯ ಬಗ್ಗೆ ರಾತ್ರಿ 8.41 ರ ಸುಮಾರಿಗೆ ದಯಾಳ್‌ಪುರ ಪೊಲೀಸ್ ಠಾಣೆಯಲ್ಲಿ ಪಿಸಿಆರ್ ಕರೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ತಂಡವನ್ನು ತಕ್ಷಣವೇ ನೆಹರು ವಿಹಾರ್‌ನ ಗಾಲಿ ನಂ. 2ಕ್ಕೆ ಕಳುಹಿಸಲಾಯಿತು, ಅಲ್ಲಿ ಬಾಲಕಿಯನ್ನು ಆಕೆಯ ತಂದೆ ಈಗಾಗಲೇ ಜಗ ಪ್ರವೇಶ ಚಂದ್ರ (ಜೆಪಿಸಿ) ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಕೊಂಡರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿ ಮೃತಪಟ್ಟಿದ್ದಾಳೆಂದು ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು.
ಪ್ರಾಥಮಿಕವಾಗಿ, ವೈದ್ಯರು ಬಾಲಕಿ ಮುಖದ ಮೇಲೆ ಗೋಚರಿಸುವ ಗಾಯಗಳನ್ನು ಕಂದು ಹತ್ಯೆಗೆ ಮುನ್ನ ಲೈಂಗಿಕ ದೌರ್ಜನ್ಯದ ಸಾಧ್ಯತೆಯನ್ನು ಸೂಚಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ನಂತರ, ಅಪರಾಧ ಸ್ಥಳ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು. ಅಪರಾಧಿಯನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
Advertisement