
ಮೇಘಾಲಯ: ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣ ದೊಡ್ಡ ತಿರುವು ಪಡೆದುಕೊಂಡಿದ್ದು, ರಾಜ ರಘುವಂಶಿ ಕೊಲೆಗೆ ಪತ್ನಿ ಸೋನಮ್ ರಘುವಂಶಿಯೇ ಸಂಚು ರೂಪಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಈ ಕೊಲೆ ಅಕ್ರಮ ಸಂಬಂಧವೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಮೇ 11 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಾಜ ರಘುವಂಶಿ ಮತ್ತು ಸೋನಮ್ ದಂಪತಿ ಮೇ 20 ರಂದು ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದರು. ಅವರು ಮೇ 22 ರಂದು ಬಾಡಿಗೆ ಸ್ಕೂಟರ್‌ನಲ್ಲಿ ಮೌಲಾಖಿಯಾತ್ ಗ್ರಾಮಕ್ಕೆ ಬಂದಿದ್ದರು.
ಮೇ 23 ರಂದು ದಂಪತಿಗಳು ನಾಪತ್ತೆಯಾಗಿದ್ದು, ಜೂನ್ 2 ರಂದು ರಾಜ ರಘುವಂಶಿ ಅವರ ಶವ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು. ನಂತರ ಜೂನ್ 8 ರಂದು ಉತ್ತರ ಪ್ರದೇಶದ ಘಾಜಿಪುರದಲ್ಲಿ ಪತ್ನಿ ಸೋನಮ್‌ರನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮೇಘಾಲಯ ಪೊಲೀಸರ ಪ್ರಕಾರ, ಸೋನಮ್ 21 ವರ್ಷದ ರಾಜ್ ಕುಶ್ವಾಹ ಅವರೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಮತ್ತು ಅವರ ಪತಿಯನ್ನು ಕೊಲ್ಲಲು ಪ್ರಿಯತಮನೊಂದಿಗೆ ಸಂಚು ರೂಪಿಸಿದ್ದರು. ಹೀಗಾಗಿ ಇಬ್ಬರನ್ನೂ ಬಂಧಿಸಲಾಗಿದೆ.
ಸೋನಮ್, ಇಂದೋರ್‌ನಲ್ಲಿ ತನ್ನ ಮಾಜಿ ಉದ್ಯೋಗಿಯಾಗಿದ್ದ ರಾಜ್ ಮತ್ತು ಇತರ ಮೂವರು - ವಿಶಾಲ್ ಸಿಂಗ್ ಚೌಹಾಣ್ (22), ಆಕಾಶ್ ರಜಪೂತ್ (19) ಮತ್ತು ಆನಂದ್ ಸಿಂಗ್ ಕುರ್ಮಿ(23) ಸಹಾಯದಿಂದ ಕೊಲೆಗೆ ಸಂಚು ರೂಪಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದು, ಈ ನಾಲ್ವರನ್ನು ಬಂಧಿಸಲಾಗಿದೆ.
"ರಾಜ್ ಕುಶ್ವಾಹ, ರಘುವಂಶಿ ಕೊಲೆ ಮೂವರಿಗೆ ಸುಪಾರಿ ನೀಡಿದ್ದರು. ರಾಜ್ ಕುಶ್ವಾಹ ಸ್ವತಃ ಮೇಘಾಲಯಕ್ಕೆ ಯಾವತ್ತೂ ಹೋಗಿಲ್ಲ" ಎಂದು ಪೂರ್ವ ಖಾಸಿ ಹಿಲ್ಸ್ ಎಸ್ಪಿ ವಿವೇಕ್ ಸೈಮ್ ಹೇಳಿದ್ದಾರೆ.
ಏತನ್ಮಧ್ಯೆ, ಸೋನಮ್ ಅವರ ತಂದೆ, ತನ್ನ ಮಗಳ ವಿರುದ್ಧ ಕೊಲೆ ಆರೋಪವನ್ನು ತಿರಸ್ಕರಿಸಿದ್ದಾರೆ ಮತ್ತು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಮೇಘಾಲಯ ಪೊಲೀಸರು ತಮ್ಮ ಮಗಳ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
Advertisement