
ಮೇಘಾಲಯ: ಥೇಟ್ 'ಬಾ ನಲ್ಲೆ ಮಧುಚಂದ್ರಕೆ' ಸಿನಿಮಾದಂತೆ ಮೇಘಾಲಯದಲ್ಲಿ ಕೊಲೆಯೊಂದು ನಡೆದಿದೆ. ಆದರೆ ಇದು ಸ್ವಲ್ಪ ಭಿನ್ನವಾಗಿದೆ. ಸಿನಿಮಾದಲ್ಲಿ ಆಗತಾನೇ ಹೊಸದಾಗಿ ಮದುವೆಯಾದ ಪತ್ನಿಯನ್ನು ಪತಿ ಆಳವಾದ ಕಮರಿಗೆ ತಳ್ಳಿ ಕೊಲೆ ಮಾಡಿದ್ದರೆ, ಇಲ್ಲಿ ಪತಿಯನ್ನು ಕಮರಿಗೆ ತಳ್ಳಿ ಹತ್ಯೆ ಮಾಡಿ ಬಳಿಕ ನಾಪತ್ತೆಯಾಗಿದ್ದ ಪತ್ನಿ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾಳೆ.
ಹೌದು. ಹನಿಮೂನ್ ವೇಳೆಯಲ್ಲಿ ಮೇಘಾಲಯದಲ್ಲಿ ಶವವಾಗಿ ಪತ್ತೆಯಾಗಿದ್ದ ಇಂದೋರ್ ನ ರಾಜಾ ರಘುವಂಶಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿಯನ್ನು ಬಂಧಿಸಲಾಗಿದೆ. ಸುಪಾರಿ ಹಂತಕರಿಂದ ಪತ್ನಿ ಸೋನಂ ಕೊಲೆಗೆ ಸಂಚು ಮಾಡಿರುವುದಾಗಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಉತ್ತರ ಪ್ರದೇಶದ ಗಾಜಿಪುರದಲ್ಲಿ ಸೋನಂ ಪತ್ತೆಯಾಗಿದ್ದು, ಅಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ. ರಾತ್ರಿ ನಡೆಸಿದ ದಾಳಿಯಲ್ಲಿ ಇತರ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ರಘುವಂಶಿಯನ್ನು ಕೊಲ್ಲಲು ಸೋನಂ ತಮಗೆ ಸುಪಾರಿ ನೀಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೇಘಾಲಯದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಇಡಶಿಶಾ ನೋಂಗ್ರಾಂಗ್ ಅವರು ಹೇಳಿರುವುದಾಗಿ ವರದಿಗಳು ತಿಳಿಸಿವೆ.
"ಒಬ್ಬ ವ್ಯಕ್ತಿಯನ್ನು ಉತ್ತರ ಪ್ರದೇಶದಿಂದ ಬಂಧಿಸಲಾಗಿದೆ. ಇಬ್ಬರು ಆರೋಪಿಗಳನ್ನು ಎಸ್‌ಐಟಿ ಇಂದೋರ್‌ನಿಂದ ಬಂಧಿಸಿದೆ. ಸೋನಂ ನಂದಗಂಜ್ ಪೊಲೀಸ್ ಠಾಣೆಯಲ್ಲಿ ಶರಣಾದ ನಂತರ ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ರಾಜಾ ರಘುವಂಶಿ ಮತ್ತು ಸೋನಂ ತಮ್ಮ ಹನಿಮೂನ್ ಗಾಗಿ ಮೇಘಾಲಯಕ್ಕೆ ಪ್ರಯಾಣಿಸಿದ್ದರು ಮತ್ತು ಮೇ 23 ರಂದು ನಾಪತ್ತೆಯಾಗುವ ಮುನ್ನಾ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದರು. ಜೂನ್ 2 ರಂದು ರಾಜಾ ಅವರ ದೇಹವು ಕಮರಿಯಲ್ಲಿ ಪತ್ತೆಯಾಗಿದ್ದರೆ, ಸೋನಂಗಾಗಿ ಹುಡುಕಾಟ ನಡೆಸಲಾಯಿತು. ಪ್ರಕರಣವನ್ನು ಭೇದಿಸಿರುವ ಪೊಲೀಸರನ್ನು ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಶ್ಲಾಘಿಸಿದ್ದಾರೆ.
ಏಳು ದಿನಗಳಲ್ಲಿ ಪ್ರಕರಣ ಬೇಧಿಸಿದ ಪೊಲೀಸರು: "ಕೊಲೆ ನಡೆದ ಏಳು ದಿನಗಳಲ್ಲಿ ರಾಜಾ ಕೊಲೆ ಪ್ರಕರಣವನ್ನು ಮೇಘಾಲಯ ಪೊಲೀಸರು ಭೇದಿಸಿದ್ದಾರೆ. ಮಧ್ಯಪ್ರದೇಶದ ಮೂವರು ಆತಂಕರನ್ನು ಬಂಧಿಸಿದ್ದಾರೆ. ಒಬ್ಬ ಮಹಿಳೆ ಶರಣಾಗಿದ್ದಾಳೆ. ಇನ್ನೋರ್ವ ಆರೋಪಿಯ ಹುಡುಕಾಟ ಮುಂದುವರೆದಿದೆ ಮೇಘಾಲಯ ಪೊಲೀಸರು ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ.
ಮೇಘಾಲಯದಲ್ಲಿ ತಮ್ಮ ಹನಿಮೂನ್ ಸಮಯದಲ್ಲಿ ನಾಪತ್ತೆಯಾದ ದಿನ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್ ಮೂವರು ಪುರುಷರೊಂದಿಗೆ ಇದದ್ದನ್ನು ನೋಡಿದ್ದಾಗಿ ಮೌಲಾಖಿಯಾತ್‌ನ ಪ್ರವಾಸಿ ಮಾರ್ಗದರ್ಶಿ ಆಲ್ಬರ್ಟ್ ಪಿಡೆ ಶನಿವಾರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಮೇ 23 ರಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನೊಂಗ್ರಿಯಾಟ್‌ನಿಂದ ಮೌಲಾಖಿಯಾತ್‌ಗೆ 3,000 ಮೆಟ್ಟಿಲುಗಳನ್ನು ಹತ್ತುವಾಗ ಮೂವರು ಪುರುಷರೊಂದಿಗೆ ದಂಪತಿ ನೋಡಿದ್ದೆ. ಅದಕ್ಕೂ ಹಿಂದಿನ ದಿನ ನೋಂಗ್ರಿಯಾಟ್‌ನಲ್ಲಿರುವ ಪ್ರಸಿದ್ಧ ಲಿವಿಂಗ್ ರೂಟ್ ಬ್ರಿಡ್ಜ್‌ಗೆ ಮಾರ್ಗದರ್ಶನ ನೀಡಲು ಮುಂದಾದಾಗದ ನಿರಾಕರಿಸಿದ ದಂಪತಿ ಇನ್ನೊಬ್ಬ ಮಾರ್ಗದರ್ಶಿಯನ್ನು ನೇಮಿಸಿಕೊಂಡರು. ಮೂವರು ವ್ಯಕ್ತಿಗಳು ಹಿಂದಿಯಲ್ಲಿ ಮಾತನಾಡುತ್ತಿದ್ದರು, ಅವರು ಸ್ಥಳೀಯರಾಗಿರಿಲ್ಲ ಎಂದು ಗೈಡ್ ಹೇಳಿದರು.
ಕಮರಿಯಲ್ಲಿ ಪತ್ತೆಯಾದ ರಘುವಂಶಿ ಮೃತದೇಹ: ರಾಜಾ ಮತ್ತು ಸೋನಂ ಇಬ್ಬರ ಕುಟುಂಬಗಳು ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಿದ್ದವು. ರಘುವಂಶಿಯ ಮೃತದೇಹ ವೈಸಾವ್ಡಾಂಗ್ ಜಲಪಾತದ ಬಳಿಯ ಕಮರಿಯಲ್ಲಿ ಪತ್ತೆಯಾಗಿದೆ. ಮೃತದೇಹದಿಂದ ಚಿನ್ನದ ಉಂಗುರ ಹಾಗೂ ಕತ್ತಿನ ಸರ ನಾಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿತ್ತು. ಕೊಲೆ ನಡೆದ ಒಂದು ದಿನದ ನಂತರ ಆ ಪ್ರದೇಶದಿಂದ ರಕ್ತದ ಕಲೆಯುಳ್ಳ ಮಚ್ಚನ್ನು ವಶಕ್ಕೆ ಪಡೆಯಲಾಗಿತ್ತು. ಎರಡು ದಿನಗಳ ನಂತರ ಸೊಹ್ರಾರಿಮ್ ಮತ್ತು ಕಮರಿಗಳ ನಡುವೆ ಇರುವ ಮೌಕ್ಮಾ ಗ್ರಾಮದಲ್ಲಿ ದಂಪತಿಗಳು ಬಳಸಿದ ರೈನ್‌ಕೋಟ್‌ಗೆ ಹೋಲುವ ರೇನ್‌ಕೋಟ್ ಕಂಡುಬಂದಿತ್ತು.
ಸಿಬಿಐ ತನಿಖೆಗೆ ಒತ್ತಾಯಿಸಿದ ಕುಟುಂಬಗಳು: ಸಿಬಿಐ ತನಿಖೆಗೆ ಆದೇಶಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿರುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಶನಿವಾರ ಹೇಳಿದ್ದರು.ಸೋನಂ ಅವರ ಕುಟುಂಬ ಕೂಡಾ ಮೇಘಾಲಯ ಪೊಲೀಸರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಕೇಂದ್ರವನ್ನು ಒತ್ತಾಯಿಸಿತ್ತು.
ತನಿಖೆಯಲ್ಲಿ ಪೊಲೀಸರ ನಿರ್ಲಕ್ಷ್ಯ ಎಂದಿದ್ದ ಸೋನಂ ತಂದೆ: ನನ್ನ ಮಗಳು ಅಪಹರಣಕ್ಕೊಳಗಾಗಿದ್ದಾಳೆ. ಮೇಘಾಲಯ ಪೊಲೀಸರು ಈ ಬಗ್ಗೆ ಸರಿಯಾಗಿ ತನಿಖೆ ನಡೆಸುತ್ತಿಲ್ಲ. ಮೊದಲಿನಿಂದಲೂ ನಿರ್ಲಕ್ಷ್ಯ ವಹಿಸಿದ್ದಾರೆ. ಅವರು ನಾಪತ್ತೆಯಾದ ದಿನದಿಂದಲೂ ಸೇನೆಯನ್ನು ನಿಯೋಜಿಸಲು ಪ್ರಯತ್ನಿಸುತ್ತಿದ್ದೆ. ಅದನ್ನು ಸಮಯಕ್ಕೆ ಮಾಡಿದ್ದರೆ, ಅವರು ಸುರಕ್ಷಿತವಾಗಿ ಪತ್ತೆಯಾಗುತ್ತಿದ್ದರು ಎಂದು ಸೋನಂ ತಂದೆ ದೇವಿ ಸಿಂಗ್ ರಘುವಂಶಿ ಹೇಳಿದ್ದರು.
ಮೇ 11 ರಂದು ವಿವಾಹವಾದ ದಂಪತಿಗಳು ಮೇ 20 ರಂದು ಮೇಘಾಲಯಕ್ಕೆ ಹನಿಮೂನ್‌ಗೆ ತೆರಳಿದ್ದರು. ಅವರು ಮೇ 22 ರಂದು ಬಾಡಿಗೆ ಸ್ಕೂಟರ್‌ನಲ್ಲಿ ಮೌಲಾಖಿಯಾತ್ ಗ್ರಾಮಕ್ಕೆ ಬಂದಿದ್ದರು. ಮೇ 24 ರಂದು, ಶಿಲ್ಲಾಂಗ್‌ನಿಂದ ಸೊಹ್ರಾಗೆ ಹೋಗುವ ರಸ್ತೆಯ ಕೆಫೆಯ ಬಳಿ ಅವರ ಸ್ಕೂಟರ್ ಕೈಬಿಟ್ಟಿರುವುದು ಕಂಡುಬಂದಿದೆ, ನಂತರ ದಂಪತಿಗಳಿಗಾಗಿ ಹುಡುಕಾಟ ಪ್ರಾರಂಭವಾಯಿತು. ಪ್ರಕರಣದ ತನಿಖೆಗಾಗಿ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು.
Advertisement