
ತಿರುಮಲ: ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ತುಪ್ಪ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಸೇವೆ ಸಲ್ಲಿಸಿದ ಟಿಟಿಡಿ ಮಾಜಿ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ನೀಡಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಎಸ್‌ಐಟಿ ಅಧಿಕಾರಿಗಳು ಟಿಟಿಡಿ ಮಾಜಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ, ಧರ್ಮ ರೆಡ್ಡಿ, ಮತ್ತಿತರ ಹಿಂದಿನ ಅಧ್ಯಕ್ಷರು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಮಾಜಿ ಟಿಟಿಡಿ ಇಒ ಅನಿಲ್ ಕುಮಾರ್ ಸಿಂಘಾಲ್ ಅವರಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ತಿರುಪತಿಯ ಪವಿತ್ರ ಲಡ್ಡು ಪ್ರಸಾದಕ್ಕೆ ಕಲಬೆರಕೆ ತುಪ್ಪದ ಪೂರೈಕೆ ಆರೋಪದ ತನಿಖೆಯಲ್ಲಿ ಇದು ಮಹತ್ವದ ಬೆಳವಣಿಯಾಗಿದೆ. ಹಗರಣದ ಕೇಂದ್ರಬಿಂದು ಎಂದು ಆರೋಪಿಸಿರುವ ಮೂರು ಡೈರಿಗಳ ನಿರ್ದೇಶಕರಿಗೆ ಜಾಮೀನು ನೀಡುವುದನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ನೇತೃತ್ವದ ಎಸ್‌ಐಟಿ ತೀವ್ರವಾಗಿ ವಿರೋಧಿಸಿದ ಎರಡು ದಿನಗಳ ನಂತರ ಈ ಬೆಳವಣಿಗೆಯಾಗಿದೆ.
ಇದು ನಂಬಿಕೆಯ ದ್ರೋಹವಾಗಿದೆ. ಇದು ಕೇವಲ ಪ್ರಸಾದದಲ್ಲಿ ವಂಚನೆ ಮಾತ್ರವಲ್ಲ,ಟಿಟಿಡಿ ಮಾತ್ರವಲ್ಲದೆ ದೇಶಾದ್ಯಂತ ಕೋಟ್ಯಂತರ ಭಕ್ತರನ್ನು ವಂಚಿಸುವ ಬಹುಕೋಟಿ ಸಂಚು ಎಂದು ಸಿಬಿಐ ನ್ಯಾಯಾಲಯದಲ್ಲಿ ವಾದಿಸಿದೆ. ಮೂರು ಡೈರಿಗಳಾದ ಭೋಲೆಬಾಬಾ, ವೈಷ್ಣವಿ ಮತ್ತು ಎಆರ್ ಡೈರಿ - ಜಂಟಿಯಾಗಿ ದಂಧೆ ನಡೆಸುತ್ತಿದ್ದಾರೆ. ನೂರಾರು ಕೋಟಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹಣಕಾಸಿನ ವಂಚನೆಯ ಜೊತೆಗೆ, ಆರೋಪಿಗಳು ತನಿಖೆಯನ್ನು ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಟಿಡಿ ಮಾಜಿ ಅಧ್ಯಕ್ಷರಿಗೆ ಇದೇ ಮೊದಲ ಬಾರಿಗೆ ನೋಟಿಸ್ ನೀಡಲಾಗುತ್ತಿದೆ. ತನಿಖೆಯು ಈಗ ತುಪ್ಪ ಸರಬರಾಜುದಾರರು ಅಲ್ಲದೇ ವೈಎಸ್‌ಆರ್‌ಸಿಪಿ ಕಾಲದಲ್ಲಿ ಸೇವೆ ಸಲ್ಲಿಸಿದ ಟಿಟಿಡಿ ಅಧಿಕಾರಿಗಳನ್ನು ಒಳಗೊಂಡಿದೆ.
Advertisement