
ಮುಂಬೈ: ಥಾಣೆ ಜಿಲ್ಲೆಯ ಮುಂಬ್ರಾ ಬಳಿ ನಡೆದ ಉಪನಗರ ರೈಲು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮಹಾರಾಷ್ಟ್ರ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ನೀಡಲಿದೆ ಎಂದು ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರು ಸೋಮವಾರ ಹೇಳಿದ್ದಾರೆ.
ದಿವಾ ಮತ್ತು ಕೋಪರ್ ರೈಲು ನಿಲ್ದಾಣಗಳ ನಡುವೆ ಇಂದು ಬೆಳಗಿನ ಜನದಟ್ಟಣೆಯ ಸಮಯದಲ್ಲಿ ವಿರುದ್ಧ ದಿಕ್ಕುಗಳಲ್ಲಿ ಚಲಿಸುತ್ತಿದ್ದ ಎರಡು ರೈಲುಗಳ ಫುಟ್‌ಬೋರ್ಡ್‌ಗಳಲ್ಲಿ ನಿಂತಿದ್ದ ಪ್ರಯಾಣಿಕರ ಬ್ಯಾಗ್ ಗಳು ಪರಸ್ಪರ ತಗುಲಿ ಹಳಿಗಳ ಮೇಲೆ ಬಿದ್ದು ಜಿಆರ್‌ಪಿ ಕಾನ್‌ಸ್ಟೆಬಲ್ ಸೇರಿದಂತೆ ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಗಾಯಾಳುಗಳ ಎಲ್ಲಾ ವೈದ್ಯಕೀಯ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಮತ್ತು ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುವುದು ಎಂದು ಮಹಾಜನ್ ತಿಳಿಸಿದ್ದಾರೆ.
"ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ನೀಡಲಿದೆ. ಗಾಯಾಳುಗಳಿಗೆ ಆರ್ಥಿಕ ನೆರವು ನೀಡಲಾಗುವುದು" ಎಂದು ಮಹಾಜನ್ ಅಪಘಾತ ನಡೆದ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ಇಂತಹ ಘಟನೆ ನಡೆದಿರುವುದು ಇದೇ ಮೊದಲು. ಈ ಅಪಘಾತದ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ದೆಹಲಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಇದರ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು. ಇದು ಮತ್ತೆಂದೂ ಸಂಭವಿಸದಂತೆ ನಾವು ಖಚಿತಪಡಿಸಿಕೊಳ್ಳಬೇಕು" ಎಂದು ಮಹಾಜನ್ ಹೇಳಿದರು.
Advertisement