
ಭೋಪಾಲ್: ಮೇಘಾಲಯಕ್ಕೆ ಹನಿಮೂನ್ ಗೆ ಬಂದಿದ್ದಾಗ ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಹತ್ಯೆ ಮಾಡಿರುವ Sonam Raghuvanshi ಸುದ್ದಿ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು ಈ ಮಧ್ಯೆ ರಾಜಾ ರಘುವಂಶಿ ಕೊಲೆ ನಂತರ ಸೋನಮ್ 17 ದಿನಗಳ ಕಾಲ ಎಲ್ಲಿದ್ದರು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ರಾಜಾ ರಘುವಂಶಿ ಹತ್ಯೆ ಪ್ರಕರಣ ಸಂಬಂಧ ಸೋಮನ್, ಪ್ರಿಯಕರ ರಾಜ್ ಕುಶ್ವಾಹ, ಮಧ್ಯಪ್ರದೇಶದ ಬಿನಾ ಮೂಲದ ಆನಂದ್, ಇಂದೋರ್‌ನ ಆಕಾಶ್ ರಜಪೂತ್ ಮತ್ತು ಉತ್ತರ ಪ್ರದೇಶದ ಲಲಿತ್‌ಪುರದ ಆಕಾಶ್ ಲೋಧಿ ಮತ್ತು ವಿಶಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೇಘಾಲಯ ಪೊಲೀಸರು ಉತ್ತರ ಪ್ರದೇಶದ ಘಾಜಿಪುರ ತಲುಪಿ ಇಂದೋರ್‌ನ ಸೋನಮ್ ರಘುವಂಶಿಯನ್ನು ವಶಕ್ಕೆ ಪಡೆದಿದ್ದು ಸಿಜೆಎಂ ನ್ಯಾಯಾಲಯವು ಸೋನಮ್ ಗೆ 72 ಗಂಟೆಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಇದಕ್ಕೂ ಮೊದಲು, ಪೊಲೀಸರು ಜಿಲ್ಲಾ ಆಸ್ಪತ್ರೆಯಲ್ಲಿ ಆರೋಪಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಪತಿ ರಾಜಾ ರಘುವಂಶಿ ಹತ್ಯೆಯಾದ 17 ದಿನಗಳ ನಂತರ, ಜೂನ್ 8ರ ಮಧ್ಯರಾತ್ರಿ ಘಾಜಿಪುರದ ಧಾಬಾದಲ್ಲಿ ಸೋನಮ್ ಆತಂಕಗೊಂಡ ಸ್ಥಿತಿಯಲ್ಲಿ ಕಂಡುಬಂದಳು. ಒನ್ ಸ್ಟಾಪ್ ಸೆಂಟರ್‌ನಲ್ಲಿ ಸೋನಮ್ ಅವರನ್ನು ಸುಮಾರು 18 ಗಂಟೆಗಳ ಕಾಲ ಪೊಲೀಸ್ ಕಣ್ಗಾವಲಿನಲ್ಲಿ ಇರಿಸಲಾಗಿತ್ತು.
ಮೂಲಗಳ ಪ್ರಕಾರ, ಸೋನಮ್ ಹತ್ಯೆಯಾದ ಎರಡು ದಿನಗಳ ನಂತರ ಮೇ 25ರಂದು ತನ್ನ ಹುಟ್ಟೂರು ಇಂದೋರ್‌ಗೆ ಮರಳಿರಬಹುದು. ಆನಂತರ ಉತ್ತರಪ್ರದೇಶದ ವಾರಣಾಸಿಗೆ ರಸ್ತೆ ಮೂಲಕ ಹೋಗಿರಬಹುದು ಎಂಬ ಮಾಹಿತಿಯನ್ನು ತನಿಖಾಧಿಕಾರಿಗಳು ಬೆನ್ನಟ್ಟುತ್ತಿದ್ದಾರೆ. ಇಂದೋರ್‌ಗೆ ಹಿಂದಿರುಗಿದ ನಂತರ ಸೋಮನ್ ಪ್ರಿಯಕರ ರಾಜ್ ಕುಶ್ವಾ (ಸೋನಮ್ ತಂದೆಯ ಪೀಠೋಪಕರಣ ವ್ಯವಹಾರದಲ್ಲಿ ಲೆಕ್ಕಪರಿಶೋಧಕ) ನನ್ನು ಭೇಟಿಯಾದಳು ಎಂದು ನಂಬಲಾಗಿದೆ. ನಂತರ ರಾಜ್ ಆಕೆಯನ್ನು ದೇವಾಸ್ ನಾಕಾ ಬಳಿಯ ಬಾಡಿಗೆ ಕೋಣೆಯಲ್ಲಿ ಇರಿಸಿದ್ದನು ಎನ್ನಲಾಗಿದೆ.
ಎರಡು ದಿನಗಳ ನಂತರ, ಅವಳನ್ನು ರಾಜ್ ಬಹುಶಃ ಟ್ಯಾಕ್ಸಿ ಮೂಲಕ ವಾರಣಾಸಿಗೆ ಕಳುಹಿಸಿದನು ಎಂದು ಆರೋಪಿಸಲಾಗಿದೆ. ನಂತರ, ಜೂನ್ 8–9 ರಂದು ಬೆಳಗಿನ ಜಾವ 1:15ರ ಸುಮಾರಿಗೆ ಪೂರ್ವ ಯುಪಿಯ ನಂದಗಂಜ್ (ಘಾಜಿಪುರ) ನಲ್ಲಿ ಮತ್ತೆ ಕಾಣಿಸಿಕೊಳ್ಳುವವರೆಗೆ ಆಕೆ ಕಣ್ಮರೆಯಾಗಿದ್ದಳು. ಈ ಮಧ್ಯೆ ಸೋನಮ್ ಜೂನ್ 8ರಂದು ಗೋರಖ್‌ಪುರಕ್ಕೆ ಹೋಗುವ ವಾರಣಾಸಿ ಐಎಸ್‌ಬಿಟಿಯಿಂದ ಬಸ್ ಹತ್ತಿದಳು. ಆದರೆ ಆ ರಾತ್ರಿ ಇಂದೋರ್‌ನಲ್ಲಿ ರಾಜ್ ಕುಶ್ವಾ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ ಎಂಬ ಸುದ್ದಿ ತಿಳಿದು ನಂದಗಂಜ್ ಬಳಿಯ ಧಾಬಾದಲ್ಲಿ ಸುಮಾರು 65 ಕಿ.ಮೀ ದೂರದಲ್ಲಿ ಇಳಿದಿದ್ದಾಳೆ. ಪ್ರತ್ಯಕ್ಷದರ್ಶಿಗಳು ವಾರಣಾಸಿ ಐಎಸ್‌ಬಿಟಿಯಲ್ಲಿ ಬಸ್ ಹತ್ತುವ ಮೊದಲು ಇಬ್ಬರು ಯುವಕರೊಂದಿಗೆ ಆಕೆ ಮಾತನಾಡುತ್ತಿರುವುದನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ.
ಇಲ್ಲಿ ಆಕೆ ಗೋರಖ್‌ಪುರಕ್ಕೆ ಏಕೆ ಹೋಗುತ್ತಿದ್ದಳು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಈ ಹಿಂದೆ ಕಳ್ಳಕಾಕರು, ಉಗ್ರರು, ಅಪರಾಧ ನಡೆಸಿದ್ದವರು ನೇಪಾಳಕ್ಕೆ ತಪ್ಪಿಸಿಕೊಳ್ಳಲು ಆ ಮಾರ್ಗವನ್ನು ಬಳಸುತ್ತಿದ್ದರು. ನಾಲ್ವರು ಪುರುಷ ಶಂಕಿತರು ಮತ್ತು ಸೋನಮ್ ಅವರ ಆರಂಭಿಕ ವಿಚಾರಣೆಯಿಂದ ಸಂಗ್ರಹಿಸಿದ ಮಾಹಿತಿ ಸೇರಿದಂತೆ ಈ ಎಲ್ಲಾ ಸುಳಿವುಗಳನ್ನು ನಾವು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Advertisement