
ಮೇಘಾಲಯ: ಇಡೀ ದೇಶಾದ್ಯಂತ ತೀವ್ರ ಚರ್ಚೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿರುವ ರಾಜಾ ರಘುವಂಶಿ ಕೊಲೆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರಿಗೆ ಹೊಸ ಹೊಸ ಮಾಹಿತಿಗಳು ಸಿಗುತ್ತಿವೆ. ರಾಜ್ ಕುಶ್ವಾಹಾ ಅವರನ್ನು ಪ್ರೀತಿಸುತ್ತಿದ್ದ ಸೋನಮ್, ರಾಜಾ ರಘುವಂಶಿಯನ್ನು ಮದುವೆಯಾಗುವಂತೆ ಒತ್ತಡ ಹೇರಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಕುಟುಂಬಕ್ಕೆ ಎಚ್ಚರಿಕೆ ನೀಡಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಜ್ ಜೊತೆಗಿನ ಪ್ರೀತಿ ವಿಚಾರ ಹೇಳಿಕೊಂಡಿದ್ದ ಸೋನಮ್:
ಕುಟುಂಬ ಕಚೇರಿಯಲ್ಲಿ ನೌಕರನಾಗಿದ್ದ ರಾಜ್ ಜೊತೆಗಿನ ಸಂಬಂಧದ ಬಗ್ಗೆ ಸೋನಮ್ ತನ್ನ ತಾಯಿಯೊಂದಿಗೆ ಹೇಳಿಕೊಂಡಿದ್ದಳು. ಆದರೆ ಆಕೆಯ ತಾಯಿ ಆ ಸಂಬಂಧವನ್ನು ವಿರೋಧಿಸಿದ್ದರು ಎಂದು ರಾಜಾ ಅವರ ಹಿರಿಯ ಸಹೋದರ ವಿಪಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ ಜೊತೆಗಿನ ಸಂಬಂಧದ ಬಗ್ಗೆ ಸೋನಮ್ ಕುಟುಂಬಕ್ಕೆ ತಿಳಿಸಿದ್ದಳು. ಆಕೆ ರಾಜನನ್ನು ಮದುವೆಯಾಗಲ್ಲ ಅಂತಾ ಹೇಳಿದ್ದಳು. ಆದರೆ ಆಕೆಯ ತಾಯಿ ಆರೋಪಿ ರಾಜ್ ಜೊತೆಗಿನ ಸಂಬಂಧವನ್ನು ವಿರೋಧಿಸಿ, ಸಮಾಜದೊಳಗೆ ಮದುವೆಯಾಗುವಂತೆ ಮನವೊಲಿಸಿದ್ದರು ಎಂದು ಮೂಲವೊಂದು ಹೇಳಿದೆ.
'ಆತನಿಗೆ ಏನು ಮಾಡ್ತೀನಿ ಅಂತಾ ನೀವೆಲ್ಲಾ ನೋಡ್ತಿರಾ' ಕುಟುಂಬದವರ ಮನವೊಲಿಕೆಯಿಂದ ರಾಜಾನನ್ನು ಮದುವೆಯಾಗಲು ಸೋನಮ್ ಒಪ್ಪಿಕೊಂಡಿದ್ದಳು. ಆದರೆ, ಆತನಿಗೆ ಏನು ಮಾಡುತ್ತೇನೆ ಅಂತಾ ನೀವು ನೋಡ್ತಿರಾ. ಪರಿಣಾಮಗಳನ್ನು ನೀವೆಲ್ಲರೂ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಳು. ಆದರೆ, ಆಕೆ ರಾಜನನ್ನು ಹತ್ಯೆ ಮಾಡುತ್ತಾಳೆ ಎಂದು ಯಾರೂ ಭಾವಿಸಿರಲಿಲ್ಲ ಎಂದು ವಿಪಿನ್ ಹೇಳಿದ್ದಾರೆ.
ಲವರ್ ರಾಜ್ ಕುಶ್ವಾಹ ತಾಯಿ ಹೇಳಿದ್ದೇನು?
ಮತ್ತೊಂದೆಡೆ ಮಾತನಾಡಿದ ಆರೋಪಿ ರಾಜ್ ಕುಶ್ವಾಹ ತಾಯಿ, ನನ್ನ ಮಗ ಹಾಗಲ್ಲ, ಆತ ಎಂದಿಗೂ ಈ ರೀತಿಯ ಕೃತ್ಯ ಮಾಡಲು ಸಾಧ್ಯವಿಲ್ಲ, ಅವನು ತುಂಬಾ ಚಿಕ್ಕವನಾಗಿದ್ದು, ತನ್ನ ತಂದೆ ತೀರಿಕೊಂಡ ನಂತರ ಮೂವರು ಮೂವರು ಸಹೋದರಿಯರನ್ನು ನೋಡಿಕೊಳ್ಳುತ್ತಿದ್ದನು. ಅವನು ಗೋವಿಂದ್ (ಸೋನಂ ರಘುವಂಶಿಯ ಸಹೋದರ) ಕಚೇರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು. ನನ್ನ ಪತಿ 2020 ರಲ್ಲಿ ನಿಧನರಾದರು. ಅಲ್ಲಿಂದಲೂ ನನ್ನ ಮಗನೇ ಮನೆ ನೋಡಿಕೊಳ್ಳುತ್ತಿದ್ದಾನೆ. ಈಗ ಕೊಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದು, ನಮಗೆ ಏನು ಮಾಡುವುದು ಎಂದು ತೋಚುತ್ತಿಲ್ಲ. ಮೇಘಾಲಯಕ್ಕೆ ಭೇಟಿ ನೀಡಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಆರೋಪಿ ರಾಜ್ ಕುಶ್ವಾಹನ ಸಹೋದರಿ ಸುಹಾನಿ, "ನನ್ನ ಸಹೋದರ ಏನೂ ಮಾಡಿಲ್ಲ, ಅವನಿಗೆ ನ್ಯಾಯ ಸಿಗಬೇಕು, ಕ್ರೈಂ ಬ್ರಾಂಚ್ ಗೆ ಹೋದಾಗ ಆತನನ್ನು ನೋಡಲು ಅವಕಾಶ ಸಿಗಲಿಲ್ಲ. ಸೋನಮ್ ರಘುವಂಶಿ ಬಗ್ಗೆ ಆತ ಎಂದಿಗೂ ಮಾತನಾಡಿರಲಿಲ್ಲ. 10 ನೇ ತರಗತಿವರೆಗೂ ಓದಿದ್ದು, ನಂತರ ವ್ಯಾಸಂಗ ಮಾಡಿಲ್ಲ. ಆತನನ್ನು ನೋಡಲು ಮೇಘಾಲಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಆತನಿಗೆ ನ್ಯಾಯ ಸಿಗಬೇಕು ಎಂಬುದೇ ನಮ್ಮ ಬೇಡಿಕೆಯಾಗಿದೆ ಎಂದು ತಿಳಿಸಿದರು.
Advertisement