ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧದ ತನಿಖೆ ಕೈಬಿಟ್ಟ ಸುಪ್ರೀಂ ಕೋರ್ಟ್: ಧಂಖರ್ ಯಾಕೆ ಕ್ರಮ ಕೈಗೊಂಡಿಲ್ಲ? ಕಪಿಲ್ ಸಿಬಲ್
ನವದೆಹಲಿ: ರಾಜ್ಯಸಭೆಯ ಮಧ್ಯಪ್ರವೇಶದ ನಂತರ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಶೇಖರ್ ಕುಮಾರ್ ಯಾದವ್ ವಿರುದ್ಧದ ತನಿಖೆಯನ್ನು ಸುಪ್ರೀಂ ಕೋರ್ಟ್ ಕೈಬಿಟ್ಟಿದೆ ಎಂಬ ವರದಿಗಳ ನಡುವೆ ನ್ಯಾಯಾಧೀಶರ ವಿರುದ್ಧದ ದೋಷರೋಪಣೆ ನೋಟಿಸ್ ಗೆ ಸಭಾಪತಿ ಜಗದೀಪ್ ಧಂಖರ್ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಮೇಲ್ಮನೆ ಸಂಸದ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
ರಾಜಧಾನಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಪ್ರೀಂಕೋರ್ಟ್ ಹಿರಿಯ ವಕೀಲ ಮತ್ತು SCBA ಅಧ್ಯಕ್ಷರೂ ಆಗಿರುವ ಸಿಬಲ್, ಇಡೀ ಘಟನೆಯು "ತಾರತಮ್ಯ" ವನ್ನು ತೋರಿಸುತ್ತದೆ. ಕಳೆದ ವರ್ಷ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಟೀಕೆ ಮಾಡಿದ್ದ ನ್ಯಾಯಾಧೀಶರನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
"ಒಂದು ಕಡೆ ಯಾದವ್ ವಿರುದ್ಧ ಮೇಲ್ಮನೆಯಲ್ಲಿ ಒಂದು ಅರ್ಜಿ ಬಾಕಿ ಉಳಿದಿರುವುದರಿಂದ ಅವರ ವಿರುದ್ಧ ಆಂತರಿಕ ತನಿಖೆ ನಡೆಸಬೇಡಿ ಎಂದು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಯು ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ಇದನ್ನು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಪ್ರಕರಣದಲ್ಲಿ ಮಾಡಲಿಲ್ಲ ಎಂದರು.
ನ್ಯಾಯಮೂರ್ತಿ ವರ್ಮಾ ವಿರುದ್ಧ ಆಂತರಿಕ ತನಿಖೆ ಕುರಿತು ಏಕೆ ನೀವು ಪತ್ರ ಬರೆಯಲಿಲ್ಲ. ಹಾಗಾಗೀ ಈ ಸರ್ಕಾರ ಶೇಖರ್ ಯಾದವ್ ಅವರನ್ನು ರಕ್ಷಿಸಲು ಬಯಸಿದೆ. ಅವರನ್ನು ರಕ್ಷಿಸಲು ಬಯಸಿದ್ದಾರೆ ಎಂದು ನಾವು ಭಾವಿಸುತ್ತೇವೆ ಎಂದು ಅವರು ಹೇಳಿದರು.
ವಿಹೆಚ್ ಪಿ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಹೇಳಿದ್ದೇನು?
ಡಿಸೆಂಬರ್ 8, 2024 ರಂದು ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಾದವ್ ಅವರು ಏಕರೂಪ ನಾಗರಿಕ ಸಂಹಿತೆಯ ಕುರಿತು ಮಾತನಾಡುತ್ತಾ, ಮುಸ್ಲಿಮರು ನಮ್ಮ ಸಂಸ್ಕೃತಿಯನ್ನು ಅನುಸರಿಸಬೇಕೆಂದು ಹಿಂದೂಗಳು ನಿರೀಕ್ಷಿಸಲ್ಲ. ಆದರೆ ಅವರು ಅದನ್ನು ಅಗೌರವಗೊಳಿಸಬಾರದು ಎಂದು ಬಯಸುತ್ತಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ವಿಹೆಚ್ ಪಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನ್ಯಾಯಮೂರ್ತಿ ಯಾದವ್, ದೇಶವು ಬಹುಸಂಖ್ಯಾತರ ಇಚ್ಚೆಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದರು. ನ್ಯಾಯಮೂರ್ತಿ ವರ್ಮಾ ಅವರ ವಿವಾದಾತ್ಮಕ ಹೇಳಿಕೆ ವಿರೋಧಿಸಿ ರಾಜ್ಯಸಭೆಯ ವಿಪಕ್ಷ ಸದಸ್ಯರು ಡಿಸೆಂಬರ್ 13, 2024 ರಂದು ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ದೋಷರೋಪಣೆ ನೋಟಿಸ್ ಮಂಡಿಸಿದ್ದರು.
ನೋಟಿಸ್ ನೀಡಿ ಆರು ತಿಂಗಳಾದರೂ ಕ್ರಮ ಇಲ್ಲ:
ವಿರೋಧ ಪಕ್ಷದ ಸಂಸದರು 55 ಸಂಸದರ ಸಹಿಯೊಂದಿಗೆ ರಾಜ್ಯಸಭೆಯ ಅಧ್ಯಕ್ಷರಿಗೆ ದೋಷಾರೋಪಣೆಗೆ ನೋಟಿಸ್ ನೀಡಿ ಆರು ತಿಂಗಳಾಗಿವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಯಾದವ್ ವಿರುದ್ಧ ಕ್ರಮ ಕೈಗೊಳ್ಳಲಿದ್ದರೆ ಅಥವಾ ದೋಷಾರೋಪಣೆ ನೋಟಿಸ್‌ನಲ್ಲಿ ಕೆಲವು ಸಹಿಗಳನ್ನು ತಿರಸ್ಕರಿಸಿದ್ದರೆ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಎಂದು ಕಬಿಲ್ ಸಿಬಲ್ ಹೇಳಿದರು.

