
ಅಹ್ಮದಾಬಾದ್: ಗುಜರಾತ್ ರಾಜಧಾನಿ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಪತನವಾದ ಏರ್ ಇಂಡಿಯಾ ವಿಮಾನ ಅಪಘಾತಕ್ಕೂ ಮುನ್ನ ವಿಮಾನದ ಪೈಲಟ್ Mayday ಎಚ್ಚರಿಕೆ ನೀಡಿ ಮೌನವಾದ ಎಂದು ಮೂಲಗಳು ತಿಳಿಸಿವೆ.
ಅಹಮದಾಬಾದ್ ಏರ್ಪೋರ್ಟ್ ಬಳಿ ಟೇಕ್ ಆಫ್ ಆಗುತ್ತಿದ್ದಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ವಿಮಾನ ಪತನಗೊಂಡಿದೆ.
ಏರ್ಪೋರ್ಟ್ ಬಳಿ ಮೇಧಿನಿ ನಗರ್ನಲ್ಲಿ ಈ ಘಟನೆ ಸಂಭವಿಸಿದ್ದು ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರೊಂದಿಗೆ ಲಂಡನ್‌ಗೆ ತೆರಳುತ್ತಿತ್ತು ಎನ್ನಲಾಗಿದೆ.
ವಿಮಾನವು ನಗರದ ವಿಮಾನ ನಿಲ್ದಾಣದಿಂದ ಸ್ವಲ್ಪ ದೂರದಲ್ಲಿರುವ ಫೋರೆನ್ಸಿಕ್ ಕ್ರಾಸ್ ರಸ್ತೆಯ ಬಳಿ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೆಸ್ ಮೇಲೆ ಬಿದ್ದಿದೆ.
ಪೈಲಟ್ Mayday ಎಚ್ಚರಿಕೆ
ಟೇಕ್ ಆಫ್ ಆಗುತ್ತಿದ್ದಂತೆ ವಿಮಾನ ಪತನವಾಗಿದ್ದು, ವಿಮಾನ ಪತನಕ್ಕೂ ಮುನ್ನ ವಿಮಾನದ ಪೈಲಟ್ ಸುಮಿತ್ ಸಭರ್ವಾಲ್ ಎಂಬುವವರು ಅಪಘಾತಕ್ಕೂ ಮುನ್ನ Mayday ಎಚ್ಚರಿಕೆ ನೀಡಿದ್ದ. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಈ ಬಗ್ಗೆ ಕ್ರಮ ಕೈಗೊಳ್ಳುವಷ್ಟರಲ್ಲೇ ಆತ ಮೌನವಾಗಿದ್ದ. ಬಹುಶಃ ಇದೇ ಸಂದರ್ಭದಲ್ಲೇ ವಿಮಾನ ಪತನವಾಗಿರಬಹುದು ಎಂದು ಶಂಕಿಸಲಾಗಿದೆ.
ವಿಮಾನ ಕಟ್ಟಡಕ್ಕೆ ಢಿಕ್ಕಿಯಾಗುತ್ತಲೇ ಘಟನಾ ಸ್ಥಳದಲ್ಲಿ ದಟ್ಟ ಹೊಗೆ ಆವರಿಸಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ಹಲವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಘಟನೆ ಮಧ್ಯಾಹ್ನ 1 ರಿಂದ 2 ಗಂಟೆಯ ನಡುವೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕನಿಷ್ಠ ಒಂದು ಡಜನ್ ಆಂಬ್ಯುಲೆನ್ಸ್‌ಗಳು ಬಂದಿವೆ. ಪೊಲೀಸರು ಆ ಪ್ರದೇಶದಿಂದ ಸಂಚಾರವನ್ನು ಬೇರೆಡೆಗೆ ತಿರುಗಿಸಿದ್ದಾರೆ.
ವಿಮಾನ ನಿಲ್ದಾಣ ಪ್ರದೇಶದಿಂದ ಕೆಲವು ಜನರನ್ನು ಆಸ್ಪತ್ರೆಗೆ ಕರೆದೊಯ್ಯುವುದನ್ನು ನೋಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ರಾಜ್ಯ ಪೊಲೀಸ್ ನಿಯಂತ್ರಣ ಕೊಠಡಿಯ ಪ್ರಕಾರ, ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ಸೇರಿದಂತೆ ತುರ್ತು ಸೇವೆಗಳನ್ನು ಅಪಘಾತದ ಸ್ಥಳಕ್ಕೆ ರವಾನಿಸಲಾಗಿದೆ. ಸಾವುನೋವುಗಳು ಅಥವಾ ಅಪಘಾತದ ಕಾರಣ ಸೇರಿದಂತೆ ಹೆಚ್ಚಿನ ವಿವರಗಳು ತಕ್ಷಣ ಲಭ್ಯವಿಲ್ಲ.
Advertisement