
ನವದೆಹಲಿ: ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಂಭವಿಸಿದ ದುರಂತ ಸಾವುನೋವುಗಳಿಗೆ ಸಂತಾಪ ಸೂಚಿಸಿದ ಎಲ್ಲ ವಿದೇಶಿ ನಾಯಕರು ಮತ್ತು ಸರ್ಕಾರಗಳಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶುಕ್ರವಾರ ಧನ್ಯವಾದ ತಿಳಿಸಿದ್ದಾರೆ.
242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನ ಗುರುವಾರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಪತನಗೊಂಡಿತು.
'ಅಹಮದಾಬಾದ್ ವಿಮಾನ ಅಪಘಾತದಲ್ಲಿ ಸಂಭವಿಸಿದ ದುರಂತ ಜೀವಹಾನಿಗೆ ಸಂತಾಪ ಸೂಚಿಸಿದ ಎಲ್ಲ ವಿದೇಶಿ ನಾಯಕರು ಮತ್ತು ಸರ್ಕಾರಗಳಿಗೆ ಧನ್ಯವಾದಗಳು. ಇದನ್ನು ನಾವು ತುಂಬಾ ಪ್ರಶಂಸಿಸುತ್ತೇವೆ' ಎಂದು ಜೈಶಂಕರ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಲಂಡನ್‌ಗೆ ತೆರಳುತ್ತಿದ್ದ ಬೋಯಿಂಗ್ 737 ಡ್ರೀಮ್‌ಲೈನರ್‌ನಲ್ಲಿ ದುರಂತ ಸಂಭವಿಸಿದಾಗ ವಿದೇಶಾಂಗ ಸಚಿವರು ಅಧಿಕೃತ ಭೇಟಿಗಾಗಿ ಯುರೋಪ್‌ನಲ್ಲಿದ್ದರು.
ಹಲವಾರು ವಿಶ್ವ ನಾಯಕರು ಮತ್ತು ಭಾರತದ ವಿವಿಧ ದೇಶಗಳ ರಾಯಭಾರ ಕಚೇರಿಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಸಂತಾಪ ಸೂಚಿಸಿವೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಗುರುವಾರ ವಿಮಾನ ಅಪಘಾತದ ನಂತರ ಸಂತಾಪ ಸೂಚಿಸಿದ್ದಾರೆ.
ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಅದ ಕೆಲವೇ ನಿಮಿಷಗಳಲ್ಲಿ ಅಹಮದಾಬಾದ್‌ನ ವೈದ್ಯಕೀಯ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿ, ಬೆಂಕಿಯ ಉಂಡೆಯಾಗಿ ಸಿಡಿಯಿತು. ಘಟನೆಯಲ್ಲಿ 241 ಜನರು ಸಾವಿಗೀಡಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಶದ ಅತ್ಯಂತ ಭೀಕರ ವಾಯು ದುರಂತ ಇದಾಗಿದ್ದು, ಅಪಘಾತದಿಂದ ಒಬ್ಬ ವ್ಯಕ್ತಿ ಪಾರಾಗಿದ್ದಾರೆ ಎಂದು ಏರ್ ಇಂಡಿಯಾ ದೃಢಪಡಿಸಿದೆ.
Advertisement