
ಭೋಪಾಲ್: ಗುರುವಾರ ಮಧ್ಯಾಹ್ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಘೋರ ವಿಮಾನ ದುರಂತದಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಟೆಕ್ಕಿಯೊಬ್ಬರು ಸಾವನ್ನಪ್ಪಿರುವುದು ಖಚಿತವಾಗಿದೆ. 29 ವರ್ಷದ ಸೊಸೆ ಹರ್ ಪ್ರೀತ್ ಹೊರಾ ಅವರನ್ನು ಕಳೆದುಕೊಂಡ ಇಂಧೋರ್ ನ ರಾಜ್ ಮೊಹಲ್ಲಾದಲ್ಲಿ ನೆಲೆಸಿರುವ ಸಿಖ್ ಕುಟುಂಬ, ದು:ಖದ ಮಡುವಿನಲ್ಲಿ ಮುಳುಗಿದೆ.
ಜೂನ್ 16 ರಂದು ಲಂಡನ್ ನಲ್ಲಿ ಕೆಲಸ ಮಾಡುತ್ತಿರುವ ಆಕೆಯ ಪತಿ ರಾಬಿ ಸಿಂಗ್ ಹೊರಾ ಅವರ ಹುಟ್ಟುಹಬ್ಬ ಇತ್ತು. ಅದಕ್ಕೆ ಜೂನ್ 19 ರ ಬದಲಿಗೆ ಜೂನ್ 12 ರಂದೇ ತೆರಳುವ ಮೂಲಕ ತನ್ನ ಪತಿಗೆ ಅಚ್ಚರಿ ನೀಡಲು ಬಯಸಿದ್ದ ಹರ್ ಪ್ರೀತ್ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.
ಈ ಹಿಂದೆ ಜೂನ್ 19 ರಂದು ಲಂಡನ್ ಗೆ ತೆರಳಲು ಆಕೆ ಯೋಜಿಸಿದ್ದರು. ಆದರೆ, ಪತಿಯ ಜನ್ಮ ದಿನವನ್ನು ಅವಿಸ್ಮರಣೀಯವಾಗಿಸುವ ಬಯಕೆಯಿಂದ ದಿನಾಂಕ ಬದಲಿಸಿದ್ದರು ಎಂದು ಅವರ ಮಾವನ ಸಹೋದರ ರಾಜೇಂದ್ರ ಸಿಂಗ್ ಹೂರಾ ತಿಳಿಸಿದ್ದಾರೆ.
ಅಹಮದಾಬಾದ್ ಮೂಲದ ಹರ್‌ಪ್ರೀತ್ ಅವರು 2020 ರಲ್ಲಿ ರಾಬಿಯನ್ನು ವಿವಾಹವಾಗಿದ್ದರು. ರಾಬಿ ಅವರು 2-3 ವರ್ಷಗಳಿಂದ ಲಂಡನ್ ನಲ್ಲಿ ಪ್ರತಿಷ್ಟಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಹರ್ ಪ್ರೀತ್ ಕೂಡಾ ಈ ಹಿಂದೆ ಕೆಲವು ದಿನ ಲಂಡನ್ ನಲ್ಲಿ ಕೆಲಸ ಮಾಡಿದ್ದರು.
ಬೆಂಗಳೂರಿನ ಕಂಪನಿಯು ಮನೆಯಿಂದಲೇ ಕೆಲಸ ಮಾಡಲು ಆಕೆಗೆ ಅನುಮತಿ ನೀಡಿತ್ತು. ನಂತರ ಆಕೆ ಲಂಡನ್‌ನಿಂದ ಕೆಲಸ ಮಾಡಲು ಯೋಜಿಸಿದ್ದಳು ಎಂದು ಅವರ ಇಂದೋರ್ ಮೂಲಕ ಸಂಬಂಧಿ ದರ್ಶಿತ್ ಹೊರಾ ತಿಳಿಸಿದರು.
Advertisement