ಅಸ್ಸಾಂನಲ್ಲಿ ಕೋಮು ಉದ್ವಿಗ್ನತೆ; ಕಂಡಲ್ಲಿ ಗುಂಡಿಕ್ಕಲು ಸಿಎಂ ಹಿಮಂತ ಬಿಸ್ವಾ ಆದೇಶ; Video
ಗುವಾಹಟಿ: ಅಸ್ಸಾಂನ ಧುಬ್ರಿ ಪಟ್ಟಣದಲ್ಲಿ ಕೋಮು ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶಾಂತಿ ಕಾಪಾಡಲು ಕಂಡಲ್ಲಿ ಗುಂಡು ಹಾರಿಸುವಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶುಕ್ರವಾರ ನಿರ್ದೇಶನ ನೀಡಿದ್ದಾರೆ.
ಬಾಂಗ್ಲಾದೇಶದ ಗಡಿಯಲ್ಲಿರುವ ಮುಸ್ಲಿಂ ಬಹುಸಂಖ್ಯಾತ ಈ ಜಿಲ್ಲೆಗೆ ರಾಜ್ಯ ಸರ್ಕಾರವು ಆರ್‌ಎಎಫ್ ಮತ್ತು ಸಿಆರ್‌ಪಿಎಫ್ ಸೇರಿದಂತೆ ಅರೆಸೈನಿಕ ಪಡೆಗಳನ್ನು ನಿಯೋಜಿಸುತ್ತಿದೆ.
ಬಾಂಗ್ಲಾದೇಶ ಪರ ಪೋಸ್ಟರ್ ಅಭಿಯಾನ ಮತ್ತು ಹನುಮಾನ್ ದೇವಾಲಯದಲ್ಲಿ ಹಸುವಿನ ತಲೆ ಪತ್ತೆಯಾದ ನಂತರ ಉದ್ವಿಗ್ನತೆ ಭುಗಿಲೆದ್ದಿದ್ದು, ನಂತರ ರಾತ್ರಿ ವೇಳೆ ಕಲ್ಲು ತೂರಾಟದ ಘಟನೆಗಳು ನಡೆದಿವೆ.
ಹೆಚ್ಚುತ್ತಿರುವ ಅಶಾಂತಿಯ ಮಧ್ಯೆ, ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಇಂದು ಪಟ್ಟಣಕ್ಕೆ ಭೇಟಿ ನೀಡಿದರು. ತೊಂದರೆ ಉಂಟುಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದರು.
"ನಮ್ಮ ದೇವಾಲಯಗಳಿಗೆ ಹಾನಿ ಮಾಡುವ ಉದ್ದೇಶದಿಂದ ಧುಬ್ರಿಯಲ್ಲಿ ಒಂದು ನಿರ್ದಿಷ್ಟ ಗುಂಪು ಸಕ್ರಿಯವಾಗಿದೆ. ಸಂಜೆ 6 ಗಂಟೆಯ ನಂತರ ಕಂಡಲ್ಲಿ ಗುಂಡು ಹಾರಿಸುವ ಆದೇಶ ಜಾರಿಗೊಳಿಸಲಾಗುತ್ತದೆ. ಕಲ್ಲು ತೂರಾಟ ನಡೆಸುತ್ತಿರುವವರನ್ನು ಸ್ಥಳದಲ್ಲೇ ಬಂಧಿಸಲಾಗುತ್ತದೆ" ಎಂದು ಸಿಎಂ ಹೇಳಿದರು.
ಬಾಂಗ್ಲಾದೇಶಕ್ಕೆ ಧುಬ್ರಿ ಸೇರಿಸಬೇಕು ಎಂದು ಪ್ರತಿಪಾದಿಸುವ "ನಬಿನ್ ಬಾಂಗ್ಲಾ" ಗುಂಪು ಈದ್ ಹಬ್ಬದಂದು ಪೋಸ್ಟರ್‌ಗಳನ್ನು ಹಾಕಿದೆ. ಇದು ಗಡಿಯಾಚೆಗಿನ ಪ್ರಭಾವದ ಸಂಕೇತವಾಗಿದೆ ಎಂದು ಶರ್ಮಾ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ