
ಜೆರುಸಲೆಮ್: ಇರಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಅಂತರರಾಷ್ಟ್ರೀಯ ಬೆಂಬಲ ಪಡೆಯುವ ರಾಜತಾಂತ್ರಿಕ ಪ್ರಯತ್ನದ ಭಾಗವಾಗಿ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ನರೇಂದ್ರ ಮೋದಿ ಸೇರಿದಂತೆ ಇತರ ಅನೇಕ ವಿಶ್ವ ನಾಯಕರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎಂದು ಅವರ ಕಚೇರಿ ಶುಕ್ರವಾರ ತಿಳಿಸಿದೆ.
ನಿನ್ನೆ ರಾತ್ರಿಯಿಂದ ನೆತನ್ಯಾಹು ಅವರು ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್, ಭಾರತದ ಪ್ರಧಾನಿ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ವಿಶ್ವ ನಾಯಕರೊಂದಿಗೆ ಸಂಭಾಷಣೆ ನಡೆಸಿದ್ದಾರೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಸಂಕ್ಷಿಪ್ತ ಪ್ರಕಟಣೆಯಲ್ಲಿ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೂ ಬೆಂಜಮಿನ್ ನೆತನ್ಯಾಹು ಮಾತನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು "ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರಿಂದ ದೂರವಾಣಿ ಕರೆ ಬಂದಿತ್ತು. ಅವರು ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ನನಗೆ ವಿವರಿಸಿದರು. ನಾನು ಭಾರತದ ಕಳವಳವನ್ನು ಹಂಚಿಕೊಂಡೆ ಮತ್ತು ಈ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆ ಪುನಃಸ್ಥಾಪನೆಯ ಅಗತ್ಯವನ್ನು ಒತ್ತಿ ಹೇಳಿದೆ" ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಭಾರತವು "ತೀವ್ರ ಕಳವಳ" ವ್ಯಕ್ತಪಡಿಸಿದೆ ಮತ್ತು ಪರಿಸ್ಥಿತಿಯನ್ನು "ನಿಕಟವಾಗಿ ಗಮನಿಸುತ್ತಿದೆ" ಎಂದು ಮೋದಿ ಹೇಳಿದ್ದಾರೆ.
"ಉಭಯ ಕಡೆಯವರು ಯಾವುದೇ ಉಗ್ರ ಕ್ರಮಗಳನ್ನು ತಪ್ಪಿಸಬೇಕು" ಎಂದು ಭಾರತ ಒತ್ತಾಯಿಸಿದೆ. ಈ ಪ್ರದೇಶದ ಎಲ್ಲಾ ಭಾರತೀಯ ಪ್ರಜೆಗಳು ಎಚ್ಚರಿಕೆಯಿಂದಿರಬೇಕು, ಸುರಕ್ಷಿತವಾಗಿರಬೇಕು ಮತ್ತು ಸ್ಥಳೀಯ ಭದ್ರತಾ ಸಲಹೆಗಳನ್ನು ಪಾಲಿಸಬೇಕು ಎಂದು ವಿದೇಶಾಂಗ ಸಚಿವಾಲಯ ಮನವಿ ಮಾಡಿದೆ.
Advertisement